Sunday, May 9, 2010

ಲೋಕೇಶನ ವಿಫಲತೆಗೆ ಯಾರು ಹೊಣೆ?

          ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು ೬೩% ಶೇಕಡಾದಷ್ಟು ಮಂದಿ ಮಾತ್ರ ತೇರ್ಗಡೆ ಹೊಂದಿದ್ದಾರೆ. ಇನ್ನುಳಿದವರು ಏನಾಗಿದ್ದಾರೆ? ಯಾಕೆ ಫೇಲ್ ಆಗಿದ್ದಾರೆ? ಒಬ್ಬೊಬ್ಬರದ್ದು ಒಂದೊಂದು ಕಾರಣ ಇರಬಹುದು. ಒಬ್ಬನಿಗೆ ಅನಾರೋಗ್ಯ ಇದ್ದಿರಬಹುದು. ಇನ್ನೊಬ್ಬನಿಗೆ ಓದಿದ್ದು ತಲೆಗೆ ಹತ್ತದೆ ಇದ್ದಿರಬಹುದು, ಮತ್ತೊಬ್ಬನಿಗೆ ತನ್ನ ಆಲಸ್ಯವೇ ಮುಳುವಾಗಿರಬಹುದು. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲದೇ ಪಾಠಗಳು ಸರಿಯಾಗಿ ಆಗದೇ ಪಠ್ಯ ಪುಸ್ತಕದಲ್ಲಿ ನೀಡಿದ ವಿಷಯಗಳನ್ನು ಸ್ವತಂತ್ರನಾಗಿ ಕಲಿತು ಜೀರ್ಣೆಸಿಕೊಳ್ಳಲಾಗದೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ತೇರ್ಗಡೆಯಾಗಲು ವಿಫಲನಾದ ಒಬ್ಬ ಹುಡುಗನ ಬಗ್ಗೆ.
    ಒಂದು ಹಳ್ಳಿಯ ಸರಕಾರಿ ಶಾಲೆಯ ವಿದ್ಯಾರ್ಥಿ ಲೋಕೇಶ.  ಮನೆಯಲ್ಲಿ ಉತ್ತಮವಾದ ವಿದ್ಯಾಭ್ಯಾಸ ಹೊಂದಿದವರಾರೂ ಇಲ್ಲ. ಮನೆಯಲ್ಲಿ ಕಲಿಯುವಿಕೆಯಲ್ಲಿ ಎಸ್.ಎಸ್.ಎಲ್.ಸಿ. ತನಕ ಮುಟ್ಟಿದವನು ಇವನೊಬ್ಬನೇ. ಹಾಗಾಗಿ ಮನೆಯಲ್ಲಾಗಲೀ, ಅಕ್ಕ ಪಕ್ಕದ ಮನೆಗಳಲ್ಲಾಗಲೀ ಹೇಳಿಕೊಡುವವರಿಲ್ಲ. ಶಾಲೆಯಲ್ಲಿ ಮೇಷ್ಟ್ರು ಏನು ಹೇಳಿಕೊಡುತ್ತಾರೋ ಆಷ್ಟೇ. ಇರುವ ಮೇಷ್ಟ್ರುಗಳು ಪಾಠ ಮಾಡುವಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಆದರೆ ಕೆಲವೊಂದು ವಿಷಯಗಳಿಗೆ ಪಾಠಮಾಡುವುದಕ್ಕೆ ಶಿಕ್ಷಕರೇ ಇಲ್ಲದಿದ್ದರೆ? ಆ ವಿಷಯವನ್ನು ಅಭ್ಯಸಿಸುವ ಆಸೆ ಕೈಬಿಡಬೇಕಷ್ಟೆ ಹೊರತು ಬೇರೆ ದಾರಿಯಿಲ್ಲ. ಯಾಕೆಂದರೆ ಇರುವ ಮೇಷ್ಟ್ರುಗಳಿಗೆ ಆ ವಿಷಯವನ್ನೂ ಪಾಠ ಮಾಡುವುದಕ್ಕೆ ಸಮಯ ಸಾಕಾಗುವುದಿಲ್ಲ. ಹೋಗಲಿ, ಹಳ್ಳಿಯಿಂದ ದೂರದ ಪೇಟೆಗೆ ಹೋಗಿ ಅಲ್ಲಿ ಯಾವುದಾದರೂ ಮೇಷ್ಟ್ರ ಹತ್ತಿರ ಟ್ಯೂಷನ್ ಹೇಳಿಸಿಕೊಳ್ಳೋಣವೆಂದರೆ ಅಷ್ಟೆಲ್ಲಾ ಖರ್ಚು ಮಾಡುವುದಕ್ಕೆ ಮನೆಯಲ್ಲಿ ಹಣ ಇಲ್ಲ. ಬೇರೆ ಉಪಾಯವಿಲ್ಲದೇ, ಇದ್ದದ್ದರಲ್ಲೇ ಸುಧಾರಿಸಿಕೊಂಡು ಪರೀಕ್ಷೆ ಬರೆದ.
    ರಿಸಲ್ಟ್ ಬರುವ ಮೊದಲೇ ಇಂಗ್ಲಿಷ್ ನಲ್ಲಿ ತಾನು ಪಾಸ್ ಆಗುವುದರ ಬಗ್ಗೆ ಅಪನಂಬಿಕೆ ಇತ್ತು. ತನ್ನನ್ನು ತಾನು ಅಷ್ಟರ ಮಟ್ಟಿಗೆ ವಿಮರ್ಶಿಸಿಕೊಳ್ಳಬಲ್ಲ ಬುದ್ಧಿವಂತ. ಇಂದು ರಿಸಲ್ಟ್ ಬಂದಾಗ ಕಂಡದ್ದೂ ಅದೇ. ಇಂಗ್ಲಿಷ್ ವಿಷಯದಲ್ಲಿ ಒಂದಂಕಿ. ವಿಜ್ಞಾನದಲ್ಲಿ ಪಾಸ್ ಆಗುವುದಕ್ಕೆ ಒಂಭತ್ತು ಅಂಕಗಳು ಕಡಮೆ. ಉಳಿದೆಲ್ಲಾ ವಿಷಯಗಳಲ್ಲೂ ತೇರ್ಗಡೆಯಾಗಿದ್ದಾನೆ. ತನ್ನ ಅಂಕಗಳನ್ನು ನೋಡಿದಾಗ ಆತನ ಕನಸು ಕಂಗಳು ಬತ್ತಿ ಹೋದವು.
    ಈ ಕಥೆಯನ್ನು ಕೇಳಿದಾಗ ಕೆಲವು ಶಿಕ್ಷಣ ತಜ್ಞರು " ಈ ಪರೀಕ್ಷೆಯೊಂದೇ ಜೀವನದ ಯಶಸ್ಸನ್ನು ನಿರ್ಧರಿಸುವಂಥದ್ದಲ್ಲ. ಆತ ಮರು ಯತ್ನ ಮಾಡಬಹುದು. ಮತ್ತೆ ತೇರ್ಗಡೆಯಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಧೃತಿಗೆಡಬೇಕಾಗಿಲ್ಲ" ಎಂದೆಲ್ಲಾ ಧೈರ್ಯವನ್ನು ತುಂಬಬಹುದು. ನಾನೂ ಇದನ್ನು ಒಪ್ಪುತ್ತೇನೆ. ಆದರೆ ನನ್ನ ಪ್ರಶ್ನೆ, ಆತನಿಗೆ ಈಗ ಆದ ನೋವಿಗೆ ಯಾರು ಕಾರಣರು? ಆತ ಓದುವುದರಲ್ಲಿ ಉದಾಸೀನನಾಗಿದ್ದರೆ ಅವನಿಗೆ ಮಾಡಿದ್ದುಣ್ಣೋ ಮಹರಾಯ ಎನ್ನಬಹುದಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಕಲಿಸುವ ಶಿಕ್ಷಕರಿಲ್ಲದೇ ತನ್ನ ಭಾಷೆಯಲ್ಲದ ಇಂಗ್ಲಿಷ್ ನ್ನು ಕಲಿಯುವುದು ಅಷ್ಟು ಸುಲಭವೇ? ಖಂಡಿತಾ ಇಲ್ಲ. ಹಾಗಾಗಿ ನನ್ನ ಪ್ರಕಾರ ಲೋಕೇಶ ಮತ್ತು ಅವನಂತಹ ಅನೇಕ ಹುಡುಗರ ವಿಫಲತೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕರ್ನಾಟಕದ ರಾಜ್ಯ ಶಿಕ್ಷಣ ಇಲಾಖೆಯೇ ಕಾರಣ. ಸರಿಯಾದ ಕಾಲಕ್ಕೆ ಆ ಶಾಲೆಗೆ ಶಿಕ್ಷಕರ ನೇಮಕಾತಿ ನಡೆಯುತ್ತಿದ್ದರೆ ಈ ಬಡ ವಿದ್ಯಾರ್ಥಿಗಳಿಗೂ ಒಳ್ಳೆಯ ಶಿಕ್ಷಣ ಸಿಗುತ್ತಿತ್ತು. ಎಸ್.ಎಸ್.ಎಲ್.ಸಿ. ಯಲ್ಲಿ ಪಾಸ್ ಆದ ಸಂತೋಷವನ್ನು ಅವರೂ ಆನಂದಿಸಬಹುದಿತ್ತು. ಆದರೆ ಈಗ ಆ ಆನಂದದ ಚಿಗುರು ಮುರುಟಿ ಹೋಗಿದೆ. ಇಂತಹ ಶಾಲೆಗಳನ್ನಿಟ್ಟುಕೊಂಡು, ಮಕ್ಕಳು ಬರುವುದಿಲ್ಲ ಎಂದರೆ ಅದಕ್ಕೆ ಅರ್ಥವುಂಟೇ? ಆದ್ದರಿಂದ ಮೊದಲು ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಶಿಕ್ಷಣ ಇಲಾಖೆ ಇರುವ ಶಾಲೆಗಳೆಗಳನ್ನು ಮುಚ್ಚದೇ ಸೂಕ್ತವಾದ ಸೌಲಭ್ಯಗಳನ್ನು ನೀಡಿ, ಅದು ಸರಿಯಾಗಿ ಕಾರ್ಯಗತವಾಗುವಂತೆ ನೋಡಿಕೊಂಡು, ಕಲಿಯುವ ಆಸ್ಥೆ ಇರುವ ಸಾವಿರಾರು ಬಡ ಹುಡುಗರ ಕನಸುಗಳಿಗೆ ಜೀವ ತುಂಬುವ ಕಡೆಗೆ ಗಮನ ಹರಿಸಬೇಕು.
ಅಕ್ಷರ ದಾಮ್ಲೆ.  

No comments:

Post a Comment