Tuesday, May 25, 2010

ಮರುಮೌಲ್ಯಮಾಪನ - ನಿಜವಾಗಿ ಯಾರದ್ದು?

ಈ ಲೇಖನವು ಮೇ 9 ರ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.


"ಹೋಯ್! ನಿಮ್ಮ ಮಗನಿಗೆ ಎಷ್ಟು ಮಾರ್ಕ್ ಬಂತು? ನನ್ನ ಮಗಳಿಗೆ ಸ್ವಲ್ಪ ಕಮ್ಮಿ ಬಂದಿದೆ. ಹಾಗೆ ರಿವಾಲ್ಯ್ವೇಷನ್ ಗೆ ಹಾಕ್ತಾ ಇದ್ದೇನೆ", "ನನ್ನ ಮಗನಿಗೂ ಎಣಿಸಿದಷ್ಟು ಮಾರ್ಕ್ ಬರ್ಲಿಲ್ಲ. ಹಾಗೆ ಡಿ.ಡಿ. ತೆಗೆದುಕೊಂಡು ಹೋಗೋಣ ಅಂತ ಬಂದೆ" ಮೊನ್ನೆ ಬ್ಯಾಂಕಿನಲ್ಲಿದ್ದಾಗ ಈ ಸಂಭಾಷಣೆ ಕಿವಿಗೆ ಬಿತ್ತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಫಲಿತಾಂಶಗಳು ಬಂದ ನಂತರದ ವಿದ್ಯಮಾನ ಇದು. ನೋಡಿದರೆ ಇಂತಹ ಹೆತ್ತವರ ದಂಡೇ ಅಲ್ಲಿ ಸೇರಿತ್ತು. ಕಾಲೇಜಿನಲ್ಲಿ ಅಪ್ಲಿಕೇಶನಿಗೆ ಕ್ಯೂ ನಿಲ್ಲುವ ಬದಲು ಬ್ಯಾಂಕಿನಲ್ಲಿ ಡಿ.ಡಿ. ತೆಗೆದುಕೊಳ್ಳಲು ನಿಂತಿದ್ದರು. ಸೂಕ್ಷ್ಮವಾಗಿ ಅವರ ಮಾತುಕತೆಗಳಿಗೆ ಕಿವಿಗೊಟ್ಟಾಗ ನಾನು ಕಂಡದ್ದು, ತಾವು ನಿರೀಕ್ಷಿಸಿದ ಅಂಕಗಳು ಸಿಗದ ದುಗುಡ ತುಂಬಿದ ಮಕ್ಕಳ ಮುಖಗಳು. ಕೆಲವರಲ್ಲಿ ರೋಷ ಇತ್ತು. ಇನ್ನು ಕೆಲವರಲ್ಲಿ ವ್ಯವಸ್ಥೆಯ ಬಗೆಗೆ ಅಸಹನೆ ಇತ್ತು. ಮತ್ತೆ ಕೆಲವರ ಕಣ್ಣಲ್ಲಿ ಅಳು ತುಂಬಿತ್ತು.

ಇವರೆಲ್ಲಾ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೇನೋ ಹೌದು. ಕೆಲವು ದಿನಗಳಲ್ಲಿ ಫಲಿತಾಂಶವೂ ಬರುತ್ತದೆ. ಅನೇಕರಿಗೆ ಹೆಚ್ಚು ಅಂಕಗಳೂ ಸಿಗಬಹುದು. ಆದರೆ ನನಗೆ ಮೂಡಿದ ಪ್ರಶ್ನೆ ಏನೆಂದರೆ ಇದು ನಿಜವಾಗಿ ಯಾರ ಮೌಲ್ಯಮಾಪನ? ವಿದ್ಯಾರ್ಥಿಗಳದ್ದೇ? ಮೊದಲ ಮೌಲ್ಯಮಾಪಕರದ್ದೇ? ಅಥವಾ ಪರೀಕ್ಷಾ ವ್ಯವಸ್ಥೆಯದ್ದೇ?

ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತಾವು ಅಂದುಕೊಂಡಷ್ಟೇ ಅಂಕಗಳು ಬರುವುದು ಕಡಮೆ. ಹೆಚ್ಚಿನವರಿಗೆ ಎಣಿಸಿದ್ದಕ್ಕಿಂತ ಕಡಮೆಯೇ ಬಂದಿರುತ್ತದೆ. ಇನ್ನು ಕೆಲವರಿಗೆ ತಮ್ಮ ಅಪೇಕ್ಷೆಗೂ ಮೀರಿ ಅಂಕಗಳು ಸಿಕ್ಕಿರುತ್ತವೆ. ಇಂಥವರು ಮರು ಮೌಲ್ಯಮಾಪನಕ್ಕೆ ಹಾಕುತ್ತಾರೆಯೇ? ಖಂಡಿತಾ ಇಲ್ಲ. ಯಾರು ತಾನೇ ಅಂಕಗಳನ್ನು ಕಡಮೆಗೊಳಿಸಿಕೊಳ್ಳುವುದಕ್ಕೆ ಬಯಸುತ್ತಾರೆ? ಆದರೆ ಆನೇಕ ವಿದ್ಯಾರ್ಥಿಗಳು ತಮಗೆ ನಿಜವಾಗಿ ಬರಬೇಕಾಗಿದ್ದ ಅಂಕಗಳು ಬರದಿದ್ದಾಗ ಸಹಜವಾಗಿ ಮೌಲ್ಯಮಾಪನದ ಕುರಿತು ಸಂಶಯಿಸುತ್ತಾರೆ ಹಾಗೂ ಮರುಮೌಲ್ಯಮಾಪನವನ್ನು ಬಯಸುತ್ತಾರೆ. ಇದಕ್ಕೆ ಬೇಕಾದ ವ್ಯವಸ್ಥೆಯೂ ನಮ್ಮ ಶಿಕ್ಷಣ ಇಲಾಖೆಯಲ್ಲಿದೆ. "ನೂರು ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು" ಎನ್ನುವುದೇ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೂಲ ತತ್ವವಲ್ಲವೇ?

ಇತ್ತೀಚಿನ ದಿನಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ಯಾಕೆ ಹೀಗೆ? ಎಷ್ಟೋ ಬಾರಿ ಮರು ಮೌಲ್ಯಮಾಪನ ಮಾಡಿದಾಗ ಅನೇಕ ವಿದ್ಯಾರ್ಥಿಗಳಿಗೆ ತುಂಬಾ ಅಂಕಗಳೂ ಸಿಕ್ಕಿ, ಕೆಲವೊಮ್ಮೆ ಅತ್ಯುನ್ನತ ಶ್ರೇಣಿಗೇರಿದ ಉದಾಹರಣೆಗಳು ಎಷ್ಟೋ ಇವೆ. ಮೊದಲ ಮೌಲ್ಯಮಾಪನದಲ್ಲಿ ತರಗತಿಯಲ್ಲಿ ಹಿಂದಿದ್ದವರು ಶಾಲೆಯಲ್ಲಿ ಮೊದಲಿಗರಾಗುತ್ತಾರೆ. ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಮೊದಲಿಗರಾಗಿದ್ದವರನ್ನು ಬದಿಗೆ ಸರಿಸಿ ಮೊದಲ ಸ್ಥಾನ ಆಕ್ರಮಿಸುತ್ತಾರೆ. ರಾಂಕ್ ಘೋಷಣೆಯಲ್ಲಿ ಏರುಪೇರು ಮಾಡುತ್ತಾರೆ. ಹಾಗಿದ್ದರೆ ಇದರ ಅರ್ಥವೇನು? ಮೊದಲು ತಿದ್ದಿದ ಶಿಕ್ಷಕ ಸರಿಯಾಗಿ ತಿದ್ದಲಿಲ್ಲವೆಂದೇ? ಅಥವಾ ಮರುಮೌಲ್ಯಮಾಪಕ ಉದಾರಿ ಎಂದೇ? ಎರಡೂ ಸಾಧ್ಯತೆಗಳಿವೆ. ತೊಂದರೆ ಏನೆಂದರೆ, ಉತ್ತರ ಪತ್ರಿಕೆಯನ್ನು ಮೊದಲು ತಿದ್ದಿದ ಶಿಕ್ಷಕನಿಗೆ ತಾನು ಯಾಕೆ ಕಡಮೆ ಅಂಕ ಕೊಟ್ಟೆ ಎಂಬುದರ ಕುರಿತು ವಿವರಣೆ ನೀಡಲು ಅವಕಾಶವಿರುವುದಿಲ್ಲ. ಪ್ರತಿಯೊಬ್ಬನ ಯೋಚನಾ ಕ್ರಮಗಳು ಒಂದೊಂದು ರೀತಿ. ಹಾಗಾಗಿ ಒಬ್ಬ ಶಿಕ್ಷಕನಿಗೆ ಇಷ್ಟವಾಗದ ಉತ್ತರದ ವಿಧಾನ ಇನ್ನೊಬ್ಬನಿಗೆ ಇಷ್ಟವಾಗಲೂಬಹುದು. ಹಾಗಾದಾಗ, ಪ್ರತಿಯೊಂದು ಉತ್ತರಕ್ಕೂ ಎರಡನೇ ಶಿಕ್ಷಕ ಅರ್ಧರ್ಧ ಅಂಕಗಳನ್ನು ಹೆಚ್ಚು ಕೊಟ್ಟರೂ ಒಟ್ಟು ಅಂಕಗಳು ಬಹಳ ಹೆಚ್ಚಾಗುತ್ತವೆ.

ವಾಸ್ತವಿಕವಾಗಿ ಮೌಲ್ಯಮಾಪನ ಕ್ರಮದಲ್ಲಿ, ಮರುಮೌಲ್ಯಮಾಪನ ನಡೆದೇ ಇರುತ್ತದೆ. ಯಾಕೆಂದರೆ ಒಬ್ಬ ಶಿಕ್ಷಕ ತಿದ್ದಿದ್ದರಲ್ಲಿ ತಪ್ಪುಗಳಿವೆಯೇ, ಅಂಕಗಳನ್ನು ಕೂಡುವಲ್ಲಿ ಮಾನವ ಸಹಜವಾದ ತಪ್ಪುಗಳಾಗಿವೆಯೇ ಎಂದು ಪುನಃ ಪರೀಕ್ಷಿಸುವುದಕ್ಕಾಗಿಯೇ ಅನುಭವಿ ಶಿಕ್ಷಕರನ್ನು ನೇಮಿಸಿರುತ್ತಾರೆ. ವ್ಯವಸ್ಥೆ ಹೀಗಿದ್ದೂ ಮರುಮೌಲ್ಯಮಾಪನದ ಪಿಡುಗು ಈ ಮಟ್ಟದಲ್ಲಿ ಏರುವುದಕ್ಕೆ ಏನು ಕಾರಣ? ಸಾವಿರಾರು ವಿದ್ಯಾರ್ಥಿಗಳು ಆತಂಕಭರಿತರಾಗಿ ತಿಂಗಳುಗಟ್ಟಲೆ ಸಮರ್ಪಕ ಫಲಿತಾಂಶಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಯಾಕೆ? ಮರುಮೌಲ್ಯಮಾಪನದ ವ್ಯವಸ್ಥೆ ಇರುವುದೇ ಮೌಲ್ಯಮಾಪನದ ನ್ಯೂನತೆಗಳಿಗೆ ಕಾರಣವೇ? ಇವು ಗಮನಿಸಲೇಬೇಕಾದ ಪ್ರಶ್ನೆಗಳು.

ಹೋಗಲಿ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರಾದರೂ ಯಾರು? ಹಣವಿದ್ದವರು ಮಾತ್ರ. ಯಾಕೆಂದರೆ ಬಡ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ೭೦೦ ರೂಪಾಯಿಗಳಷ್ಟನ್ನು ಕಟ್ಟಿ ಮರುಮೌಲ್ಯಮಾಪನ ಮಾಡಿಸುವುದಕ್ಕೆ ಸಾಧ್ಯವೇ? ಹಾಗಾಗಿ ಅಂತಹ ವಿದ್ಯಾರ್ಥಿಗಳು ಸಿಕ್ಕಿದ ಅಂಕಗಳಲ್ಲೇ ಸಂತೋಷಪಡಬೇಕಾಗುತ್ತದೆ. ಹೀಗಿರುವ ವ್ಯವಸ್ಥೆಯಲ್ಲಿ ಸರಕಾರ ಬಡವರಿಗೆ ಹೇಗೆ ನ್ಯಾಯ ಸಲ್ಲಿಸಿದಂತಾಗುತ್ತದೆ? ಮೊದಲ ಮೌಲ್ಯಮಾಪನವನ್ನೇ ಅಚ್ಚುಕಟ್ಟಾಗಿ ಮಾಡುವಂತೆ ವ್ಯವಸ್ಥೆ ಮಾಡಿದರೆ, ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆಯನ್ನು ಕಡಮೆಗೊಳಿಸುವುದಕ್ಕೆ ಸಾಧ್ಯವಿಲ್ಲವೇ? ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆ ಹೆಚ್ಚಿದಷ್ಟೂ ಅದು ಮೌಲ್ಯಮಾಪನದ ಗುಣಮಟ್ಟ ಕಡಮೆ ಆಗುತ್ತಿರುವುದಕ್ಕೆ ಪುರಾವೆ ಆಗುವುದಿಲ್ಲವೇ?

ಅಕ್ಷರ ಸಿ. ದಾಮ್ಲೆ.

ಸಸ್ಯ ಸಾಕೋ? ಪ್ರಾಣಿಯೇ ಬೇಕೋ?

ಇದು ಮೇ 25ರ ಕನ್ನಡ ಪ್ರಭ ಪತ್ರಿಕೆಯ 'ಕಾಲೇಜು ರಂಗ' ಪುರವಣಿಯಲ್ಲಿ ಪ್ರಕಟಗೊಂಡಿದೆ.


ಆಹಾರ ಅನ್ನುವುದು ನಮ್ಮ ದೇಹ ಪೋಷಣೆಗೆ ಬೇಕಾದ್ದು. ಅದು ಸಸ್ಯಾಹಾರವೇ ಆಗಿರಬಹುದು, ಮಾಂಸಾಹಾರವೇ ಆಗಿರಬಹುದು. ಯಾವುದಾದರೂ ನಮ್ಮ ದೇಹಕ್ಕೆ ಪೋಷಣೆ ನೀಡುತ್ತದೆ. ಸಸ್ಯಾಹಾರಿಗಳು, ಮಾಂಸಾಹಾರಿಗಳನ್ನು ಪ್ರಾಣಿಹತ್ಯೆ ಮಾಡುತ್ತಾರೆಂದು ವಿನಾಕಾರಣ ತೆಗಳುವುದು, ಬೈಯ್ಯುವುದು, ಅಸಹನೆ ವ್ಯಕ್ತಪಡಿಸುವುದು ಅಗತ್ಯವಿಲ್ಲ. ಜನ ಅವರಿಗಿಷ್ಟವಾದ ಆಹಾರ ಕ್ರಮ ಇಟ್ಟುಕೊಳ್ಳುತ್ತಾರೆ. ಕಳೆದ ವಾರ, ರೂಪಶ್ರೀ ನಾಗರಾಜ್ ರವರು ಇಷ್ಟಕ್ಕೇ ವಾದ ನಿಲ್ಲಿಸಿದ್ದರೆ ನನಗೆ ಬರೆಯುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಯಾಕೆಂದರೆ ತನ್ನ ಆಹಾರ ಕ್ರಮವನ್ನು ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಅದು ಆತನ ವ್ಯಕ್ತಿಸ್ವಾತಂತ್ರ್ಯ ಎಂದೇ ನಾನೂ ಕೂಡಾ ಪರಿಗಣಿಸುತ್ತೇನೆ.

ಸಸ್ಯಕ್ಕೂ ಜೀವವಿದೆ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟವರು ನಮ್ಮ ದೇಶದ ಹಿರಿಯ, ಪ್ರಖ್ಯಾತ ಸಸ್ಯಶಾಸ್ತ್ರಜ್ಞ ಡಾ
ಚಗದೀಶಚಂದ್ರ ಬೋಸ್ ರವರು. ಅಲ್ಲಿವರೆಗೆ ಸಸ್ಯಗಳಿಗೆ ಜೀವ ಇಲ್ಲ ಎಂಬುದಾಗಿ ಜಗತ್ತು ನಂಬಿತ್ತು. ಆನಂತರದ ದಿನಗಳಲ್ಲಿ ಸಸ್ಯಗಳ ಸ್ಪಂದನೆಗಳ ಕುರಿತು ಆಳವಾದ ಅಧ್ಯಯನಗಳು ನಡೆದಿವೆ. ಹಾಗಾಗಿ ಸಸ್ಯಗಳಿಗೂ ನೋವಾಗುತ್ತದೆ ಎಂಬ ವಿಷಯವನ್ನು ನಾವಿಂದು ಅರಿತುಕೊಂಡಿದ್ದೇವೆ. ವಾಸ್ತವಿಕವಾಗಿಯಾದರೆ, ನೋವು ಎಂಬ ಸಂವೇದನೆ ಇರುವುದು ಪ್ರಾಣಿಗಳಿಗೆ ಮಾತ್ರ. ಯಾಕೆಂದರೆ ಸಸ್ಯಗಳಲ್ಲಿ ನರಕೋಶ ಇಲ್ಲ. ಆದರೂ ನಾವು ಸಸ್ಯದ ಗೆಲ್ಲು ಕಡಿದಾಗಲೋ, ಹಣ್ಣು ಕಿತ್ತಾಗಲೋ ನೀರು ಒಸರುವುದನ್ನು ಕಂಡು ಸಸ್ಯಕ್ಕೂ ನೋವಾಗುತ್ತದೆ ಎಂದು ನಾವು ಹೇಳುತ್ತೇವೆ. ಆದರೆ ಈ ನೋವು ಪ್ರಾಣಿಯನ್ನು ಕೊಂದಷ್ಟು ದೊಡ್ಡ ಪಾಪವೇ? ಖಂಡಿತಾ ಇಲ್ಲ. ಯಾಕೆಂದರೆ ಪ್ರತಿಯೊಂದು ಜೀವಿಗೂ ಈ ಲೋಕದಲ್ಲಿ ನಮ್ಮ ಹಾಗೇ ಜೀವಿಸುವ ಹಕ್ಕಿದೆ. ಪ್ರಾಣಿಯನ್ನು ಕೊಂದ ಮೇಲೆ ಮುಗಿಯಿತು. ಆ ಜೀವ ಮರಳಿ ಬರಲಾರದು. ಆದರೆ ಸಸ್ಯಗಳಲ್ಲಿ ಹಾಗಲ್ಲ. ಹೋದ ಕಾಯಿಯನ್ನು ಅಥವಾ ಹಣ್ಣನ್ನು ಸಸ್ಯ ಮರಳಿ ಪಡೆಯಬಹುದು. ಉದುರಿದ ಅಥವಾ ಕಿತ್ತ ಎಲೆಯನ್ನು ಮತ್ತೆ ಚಿಗುರಿಸಿಕೊಳ್ಳಬಹುದು. ಎಷ್ಟೋ ಬಾರಿ ಸಸ್ಯವೇ ನೈಸರ್ಗಿಕವಾಗಿ ತನ್ನ ಎಲೆಗಳನ್ನು, ಕಾಯಿಗಳನ್ನು ಉದುರಿಸುತ್ತದೆ. ಹಾಗಾಗಿ ಸಸ್ಯಾಹಾರಿಗಳು ಒಂದು ಜೀವಿಯ ಹತ್ಯೆಯನ್ನು ಮಾಡುವುದಿಲ್ಲ. ಅಥವಾ ತರಕಾರಿ ಗಿಡವು ರಹಸ್ಯವಾಗಿ ಸಾಯುವುದೂ ಇಲ್ಲ.

ಹಿಂಸೆಯ ವಿಷಯದೊಂದಿಗೇ ನಾವು ಇನ್ನೊಂದು ಗಮನಿಸಬೇಕಾದದ್ದು ನಮ್ಮ ಹಲ್ಲಿನ ರಚನೆ. ನಮ್ಮ ಕೋರೆ ಹಲ್ಲುಗಳು ಮಾಂಸಾಹಾರಿ ಪ್ರಾಣಿಗಳ ಕೋರೆಗಳಷ್ಟು ಹರಿತವಾಗಿಲ್ಲ. ಯಾಕೆಂದರೆ ಮನುಷ್ಯನ ಮೂಲ ಆಹಾರವೇ ಸಸ್ಯಾಹಾರ. ಇನ್ನು ಮಾಂಸಾಹಾರ ಮೂಲದಿಂದಲೇ ನಮಗೆ ಹಲವಾರು ಚರ್ಮ ರೋಗಗಳು, ಕೊಬ್ಬಿನ ತೊಂದರೆಗಳು ಬಾಧೆ ಕೊಡುತ್ತವೆ. ಹೀಗಿದ್ದೂ ಅನೇಕ ಮಂದಿಗೆ ಮಾಂಸವೇ ನಿತ್ಯದಾಹಾರ. ಇರಲಿ. ಬೇಡವೆನ್ನಲಾರೆ. ಆದರೆ ನೀವು ಮಾಡುತ್ತಿರುವುದು ನ್ಯಾಯವೇ ಎಂಬುದನ್ನು ಯೋಚಿಸಿ ಎಂದು ಮಾತ್ರ ಹೇಳಬಲ್ಲೆ.

Sunday, May 9, 2010

ಲೋಕೇಶನ ವಿಫಲತೆಗೆ ಯಾರು ಹೊಣೆ?

          ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು ೬೩% ಶೇಕಡಾದಷ್ಟು ಮಂದಿ ಮಾತ್ರ ತೇರ್ಗಡೆ ಹೊಂದಿದ್ದಾರೆ. ಇನ್ನುಳಿದವರು ಏನಾಗಿದ್ದಾರೆ? ಯಾಕೆ ಫೇಲ್ ಆಗಿದ್ದಾರೆ? ಒಬ್ಬೊಬ್ಬರದ್ದು ಒಂದೊಂದು ಕಾರಣ ಇರಬಹುದು. ಒಬ್ಬನಿಗೆ ಅನಾರೋಗ್ಯ ಇದ್ದಿರಬಹುದು. ಇನ್ನೊಬ್ಬನಿಗೆ ಓದಿದ್ದು ತಲೆಗೆ ಹತ್ತದೆ ಇದ್ದಿರಬಹುದು, ಮತ್ತೊಬ್ಬನಿಗೆ ತನ್ನ ಆಲಸ್ಯವೇ ಮುಳುವಾಗಿರಬಹುದು. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲದೇ ಪಾಠಗಳು ಸರಿಯಾಗಿ ಆಗದೇ ಪಠ್ಯ ಪುಸ್ತಕದಲ್ಲಿ ನೀಡಿದ ವಿಷಯಗಳನ್ನು ಸ್ವತಂತ್ರನಾಗಿ ಕಲಿತು ಜೀರ್ಣೆಸಿಕೊಳ್ಳಲಾಗದೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ತೇರ್ಗಡೆಯಾಗಲು ವಿಫಲನಾದ ಒಬ್ಬ ಹುಡುಗನ ಬಗ್ಗೆ.
    ಒಂದು ಹಳ್ಳಿಯ ಸರಕಾರಿ ಶಾಲೆಯ ವಿದ್ಯಾರ್ಥಿ ಲೋಕೇಶ.  ಮನೆಯಲ್ಲಿ ಉತ್ತಮವಾದ ವಿದ್ಯಾಭ್ಯಾಸ ಹೊಂದಿದವರಾರೂ ಇಲ್ಲ. ಮನೆಯಲ್ಲಿ ಕಲಿಯುವಿಕೆಯಲ್ಲಿ ಎಸ್.ಎಸ್.ಎಲ್.ಸಿ. ತನಕ ಮುಟ್ಟಿದವನು ಇವನೊಬ್ಬನೇ. ಹಾಗಾಗಿ ಮನೆಯಲ್ಲಾಗಲೀ, ಅಕ್ಕ ಪಕ್ಕದ ಮನೆಗಳಲ್ಲಾಗಲೀ ಹೇಳಿಕೊಡುವವರಿಲ್ಲ. ಶಾಲೆಯಲ್ಲಿ ಮೇಷ್ಟ್ರು ಏನು ಹೇಳಿಕೊಡುತ್ತಾರೋ ಆಷ್ಟೇ. ಇರುವ ಮೇಷ್ಟ್ರುಗಳು ಪಾಠ ಮಾಡುವಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಆದರೆ ಕೆಲವೊಂದು ವಿಷಯಗಳಿಗೆ ಪಾಠಮಾಡುವುದಕ್ಕೆ ಶಿಕ್ಷಕರೇ ಇಲ್ಲದಿದ್ದರೆ? ಆ ವಿಷಯವನ್ನು ಅಭ್ಯಸಿಸುವ ಆಸೆ ಕೈಬಿಡಬೇಕಷ್ಟೆ ಹೊರತು ಬೇರೆ ದಾರಿಯಿಲ್ಲ. ಯಾಕೆಂದರೆ ಇರುವ ಮೇಷ್ಟ್ರುಗಳಿಗೆ ಆ ವಿಷಯವನ್ನೂ ಪಾಠ ಮಾಡುವುದಕ್ಕೆ ಸಮಯ ಸಾಕಾಗುವುದಿಲ್ಲ. ಹೋಗಲಿ, ಹಳ್ಳಿಯಿಂದ ದೂರದ ಪೇಟೆಗೆ ಹೋಗಿ ಅಲ್ಲಿ ಯಾವುದಾದರೂ ಮೇಷ್ಟ್ರ ಹತ್ತಿರ ಟ್ಯೂಷನ್ ಹೇಳಿಸಿಕೊಳ್ಳೋಣವೆಂದರೆ ಅಷ್ಟೆಲ್ಲಾ ಖರ್ಚು ಮಾಡುವುದಕ್ಕೆ ಮನೆಯಲ್ಲಿ ಹಣ ಇಲ್ಲ. ಬೇರೆ ಉಪಾಯವಿಲ್ಲದೇ, ಇದ್ದದ್ದರಲ್ಲೇ ಸುಧಾರಿಸಿಕೊಂಡು ಪರೀಕ್ಷೆ ಬರೆದ.
    ರಿಸಲ್ಟ್ ಬರುವ ಮೊದಲೇ ಇಂಗ್ಲಿಷ್ ನಲ್ಲಿ ತಾನು ಪಾಸ್ ಆಗುವುದರ ಬಗ್ಗೆ ಅಪನಂಬಿಕೆ ಇತ್ತು. ತನ್ನನ್ನು ತಾನು ಅಷ್ಟರ ಮಟ್ಟಿಗೆ ವಿಮರ್ಶಿಸಿಕೊಳ್ಳಬಲ್ಲ ಬುದ್ಧಿವಂತ. ಇಂದು ರಿಸಲ್ಟ್ ಬಂದಾಗ ಕಂಡದ್ದೂ ಅದೇ. ಇಂಗ್ಲಿಷ್ ವಿಷಯದಲ್ಲಿ ಒಂದಂಕಿ. ವಿಜ್ಞಾನದಲ್ಲಿ ಪಾಸ್ ಆಗುವುದಕ್ಕೆ ಒಂಭತ್ತು ಅಂಕಗಳು ಕಡಮೆ. ಉಳಿದೆಲ್ಲಾ ವಿಷಯಗಳಲ್ಲೂ ತೇರ್ಗಡೆಯಾಗಿದ್ದಾನೆ. ತನ್ನ ಅಂಕಗಳನ್ನು ನೋಡಿದಾಗ ಆತನ ಕನಸು ಕಂಗಳು ಬತ್ತಿ ಹೋದವು.
    ಈ ಕಥೆಯನ್ನು ಕೇಳಿದಾಗ ಕೆಲವು ಶಿಕ್ಷಣ ತಜ್ಞರು " ಈ ಪರೀಕ್ಷೆಯೊಂದೇ ಜೀವನದ ಯಶಸ್ಸನ್ನು ನಿರ್ಧರಿಸುವಂಥದ್ದಲ್ಲ. ಆತ ಮರು ಯತ್ನ ಮಾಡಬಹುದು. ಮತ್ತೆ ತೇರ್ಗಡೆಯಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಧೃತಿಗೆಡಬೇಕಾಗಿಲ್ಲ" ಎಂದೆಲ್ಲಾ ಧೈರ್ಯವನ್ನು ತುಂಬಬಹುದು. ನಾನೂ ಇದನ್ನು ಒಪ್ಪುತ್ತೇನೆ. ಆದರೆ ನನ್ನ ಪ್ರಶ್ನೆ, ಆತನಿಗೆ ಈಗ ಆದ ನೋವಿಗೆ ಯಾರು ಕಾರಣರು? ಆತ ಓದುವುದರಲ್ಲಿ ಉದಾಸೀನನಾಗಿದ್ದರೆ ಅವನಿಗೆ ಮಾಡಿದ್ದುಣ್ಣೋ ಮಹರಾಯ ಎನ್ನಬಹುದಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಕಲಿಸುವ ಶಿಕ್ಷಕರಿಲ್ಲದೇ ತನ್ನ ಭಾಷೆಯಲ್ಲದ ಇಂಗ್ಲಿಷ್ ನ್ನು ಕಲಿಯುವುದು ಅಷ್ಟು ಸುಲಭವೇ? ಖಂಡಿತಾ ಇಲ್ಲ. ಹಾಗಾಗಿ ನನ್ನ ಪ್ರಕಾರ ಲೋಕೇಶ ಮತ್ತು ಅವನಂತಹ ಅನೇಕ ಹುಡುಗರ ವಿಫಲತೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕರ್ನಾಟಕದ ರಾಜ್ಯ ಶಿಕ್ಷಣ ಇಲಾಖೆಯೇ ಕಾರಣ. ಸರಿಯಾದ ಕಾಲಕ್ಕೆ ಆ ಶಾಲೆಗೆ ಶಿಕ್ಷಕರ ನೇಮಕಾತಿ ನಡೆಯುತ್ತಿದ್ದರೆ ಈ ಬಡ ವಿದ್ಯಾರ್ಥಿಗಳಿಗೂ ಒಳ್ಳೆಯ ಶಿಕ್ಷಣ ಸಿಗುತ್ತಿತ್ತು. ಎಸ್.ಎಸ್.ಎಲ್.ಸಿ. ಯಲ್ಲಿ ಪಾಸ್ ಆದ ಸಂತೋಷವನ್ನು ಅವರೂ ಆನಂದಿಸಬಹುದಿತ್ತು. ಆದರೆ ಈಗ ಆ ಆನಂದದ ಚಿಗುರು ಮುರುಟಿ ಹೋಗಿದೆ. ಇಂತಹ ಶಾಲೆಗಳನ್ನಿಟ್ಟುಕೊಂಡು, ಮಕ್ಕಳು ಬರುವುದಿಲ್ಲ ಎಂದರೆ ಅದಕ್ಕೆ ಅರ್ಥವುಂಟೇ? ಆದ್ದರಿಂದ ಮೊದಲು ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಶಿಕ್ಷಣ ಇಲಾಖೆ ಇರುವ ಶಾಲೆಗಳೆಗಳನ್ನು ಮುಚ್ಚದೇ ಸೂಕ್ತವಾದ ಸೌಲಭ್ಯಗಳನ್ನು ನೀಡಿ, ಅದು ಸರಿಯಾಗಿ ಕಾರ್ಯಗತವಾಗುವಂತೆ ನೋಡಿಕೊಂಡು, ಕಲಿಯುವ ಆಸ್ಥೆ ಇರುವ ಸಾವಿರಾರು ಬಡ ಹುಡುಗರ ಕನಸುಗಳಿಗೆ ಜೀವ ತುಂಬುವ ಕಡೆಗೆ ಗಮನ ಹರಿಸಬೇಕು.
ಅಕ್ಷರ ದಾಮ್ಲೆ.  

Friday, May 7, 2010

ಠಕ್ಕ ಯೋಗಿಗೆ ಮಾರು ಹೋಗುವಿರಾ?

ಈ ಲೇಖನವು ಮೇ ೬ರ ಮಣಿಪಾಲ ಆವೃತ್ತಿಯ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.
    ಇತ್ತೀಚೆಗೆ ದೇವ ಮಾನವರು ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿದ್ದಾರೆ. ತಾನು ಮಹಾಜ್ಞಾನಿ ಎಂದು ತಮ್ಮನ್ನು ತಾವೇ ಹೇಳಿಕೊಂಡು ಜನರನ್ನು ಮರುಳು ಮಾಡುವ ದಂಧೆ ಭಾರತದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ನಮ್ಮ ಸಂಸ್ಕೃತಿಯ ರಕ್ಷಕರೆಂದು ಕರೆಸಿಕೊಳ್ಳುವ ಇಂತಹವರುಗಳ ನಿಜಬಣ್ಣ ಆಗಾಗ ಬಯಲಾಗುತ್ತಲೇ ಇರುತ್ತದೆ.  ಹಾಗಂತ ಇವರುಗಳನ್ನು ನೋಡಿ, ಸಂನ್ಯಾಸಿಗಳೆಲ್ಲರೂ ಹೀಗೆಯೇ ಇರುತ್ತಾರೆನ್ನಲಾಗದು; ಯೋಗದ ಹೆಸರು ಹೇಳುವವರೆಲ್ಲರ ತೆರೆಯ ಮರೆಯ ಜೀವನ ಬೇರೆಯದೇ ಇರುತ್ತದೆ ಎಂದು ಸಾರಾಸಗಟಾಗಿ ಹೇಳುವ ಮೂರ್ಖತನವನ್ನು ನಾನು ತೋರಲಾರೆ. ಆದರೆ ನಿಜವಾದ ಯೋಗಿಗಳ, ಸಂನ್ಯಾಸಿಗಳ ಮಧ್ಯೆ ಇಂತಹ ದರಿದ್ರಗಳು ಸೇರಿಕೊಂಡಾಗ, ಎಲ್ಲಾ ಬಣ್ಣ ಮಸಿ ನುಂಗಿದಂತಾಗುವುದು ಸುಳ್ಳಲ್ಲ.
    ನಿಮಗೆ ಆ ತೊಂದರೆ ಇದೆ, ಈ ತೊಂದರೆ ಇದೆ, ನೀವು ನಡೆಯುವುದು ಸರಿ ಇಲ್ಲ, ನಿಮ್ಮ ಹೊಟ್ಟೆಯ ಬೆಳವಣಿಗೆ ಸರಿ ಆಗಿಲ್ಲ, ಹೀಗೆ ಜನರ ಬಾಹ್ಯ ಸೌಂದರ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಹೇಳುವ ಮೂಲಕ, ನಿಜವಾಗಿ ಇಲ್ಲದಿದ್ದರೂ, ಇದೆ ಎಂದು ಬಹಳ ಜ್ಞಾನಿಯಂತೆ ಖಚಿತವಾಗಿ ಹೇಳುವ ಮೂಲಕ,  ಜನರಲ್ಲಿ ’ತಾನು ಸರಿ ಇಲ್ಲ’ ಎಂಬ ಭಾವ ಮೂಡುವಂತೆ ಮಾಡಿ, ಅದಕ್ಕೆ ತಾನು ಪರಿಹಾರ ನೀಡುತ್ತೇನೆ ಅಂತ ಒಂದಿಷ್ಟು ಶಿಷ್ಯರನ್ನು ಸಂಪಾದಿಸುವ ಹಲವಾರು ಖದೀಮರನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದು. ಇಂತಹವರ ಶಿಷ್ಯವರ್ಗದಲ್ಲಿ ಡಾಕ್ಟರುಗಳು, ಇಂಜಿನಿಯರುಗಳು, ಅಥವಾ ಉನ್ನತ ವಿದ್ಯಾಭ್ಯಾಸವನ್ನು ಹೊಂದಿದ ವ್ಯಕ್ತಿಗಳೂ ಸೇರಿರುತ್ತಾರೆ. ಎಷ್ಟೋ ಬಾರಿ, ಚೆನ್ನಾಗಿ ವೈದ್ಯಕೀಯ ವಿಜ್ಞಾನವನ್ನು ಅಭ್ಯಸಿಸಿ, ತನ್ನ ದೇಹದ ಪ್ರತಿಯೊಂದು ಭಾಗದ ಕುರಿತು ಆಳವಾಗಿ ತಿಳಿದಿರುವ ಉತ್ತಮ ವೈದ್ಯರೂ ಇಂತಹವರ ಮಾತುಗಳನ್ನು ಕೇಳಿ ಮೌಢ್ಯಕ್ಕೊಳಗಾಗುತ್ತಾರೆ.  ಸರಿಯಾಗಿಯೇ ಇರುವ ತಮ್ಮ ದೇಹಾಂಗ ರಚನೆಯ ಬಗ್ಗೆ ಸಂಶಯಿಸುತ್ತಾರೆ. ಮಾತಿನ ಜಾಣ್ಮೆ ಇರುವ ಸೊ ಕಾಲ್ಡ್ ಯೋಗಿಗಳು ಅವರನ್ನು ಚಿಕಿತ್ಸೆಯ ಹೆಸರಲ್ಲಿ ಬೇಕಾದಂತೆ  ಬಳಸಿಕೊಳ್ಳುತ್ತಾರೆ (ಹೇಗಾದರೂ ಇರಬಹುದು).
    ಪ್ರಾಯಶಃ ಕಲಿಯುವುದರಲ್ಲಿ ಜಾಣರಾಗಿದ್ದೂ, ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆಗಾಗಿ ಪಠ್ಯದ ಓದನ್ನು ಬಿಟ್ಟು ಇನ್ನೇನನ್ನೂ ತಿಳಿದುಕೊಳ್ಳದೇ ಡಾಕ್ಟರ್ ಗಳೋ, ಇಂಜಿನಿಯರುಗಳೋ ಅಥವಾ ಇನ್ನೇನಾದರೂ ಆದ ವ್ಯಕ್ತಿಗಳು ಉದ್ಯೋಗಕ್ಕೆ ಸೇರಿದ ಬಳಿಕ ಕೆಲಸಗಳ ಒತ್ತಡದಿಂದ ಹೊರಬರಲಾಗದ ಸ್ಥಿತಿಯನ್ನು ತಲುಪಿದಾಗ, ಅವರಿಗೆ ಮೇಲೆ ಉಲ್ಲೇಖಿಸಿದಂತಹ  ಮೋಸಗಾರರ ಮಾತುಗಳು ಹಿತವೆನಿಸುತ್ತವೆ. ಅವರು ಹೇಳಿ ಕೊಡುವ ಬಾಲಿಶ ಆಟಗಳು, ಏನೋ ಒಂದು ಸ್ವಲ್ಪ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳನ್ನು ಪರಿಹಾರವೆಂದು ತಿಳಿಯುತ್ತಾರೆ. ಇವರು ಹೇಳಿಕೊಡುವ ವಿಷಯಗಳೆಲ್ಲವೂ ಸರಿ ಇರುತ್ತದೆ ಅಂತೇನಿಲ್ಲ. ಮತ್ತು ಸರಿ ಇಲ್ಲದಾಗ ಅದರಿಂದ ತೊಂದರೆಯೂ ಇದೆ ಎಂಬುದೂ ತಿಳಿದಿರುವ ವಿಷಯವೇ. ಆದರೂ ಇವು ತಮ್ಮ ಸಮಸ್ಯೆಯಿಂದ ಸ್ವಲ್ಪ ಹೊರಬರಲು ಸಹಕಾರಿಯಾಗುತ್ತದೆಂದು ಅಚಲವಾಗಿ ನಂಬಿರುತ್ತಾರೆ. ಹೀಗೆ ತಮ್ಮ ಪರೀಕ್ಷಕ ದೃಷ್ಟಿಯನ್ನು ಕಳಕೊಂಡು ಆ ವ್ಯಕ್ತಿಯೇ ಲೋಕದಲ್ಲಿ ಸರ್ವ ಶ್ರೇಷ್ಠ ಯೋಗಿ ಎಂದು ನಂಬುತ್ತಾರೆ. ಇದು ಕಪಟಿಯಾದರೂ ಆಚಾರ್ಯ, ಗುರು, ಪಂಡಿತ ಅಂತ ಕರೆಸಿಕೊಳ್ಳುವುದಕ್ಕೆ ಆ ವ್ಯಕ್ತಿಗೆ ಸುಲಭವಾಗುತ್ತದೆ.
    ಸಾಧಾರಣವಾಗಿ ಇಂತಹ ದುರ್ಜನರ ಗಾಳಕ್ಕೆ ಸುಲಭವಾಗಿ ಬೀಳುವವರು ಸ್ತ್ರೀಯರು. ಅದರಲ್ಲೂ ವಿವಾಹಿತ ಸ್ತ್ರೀಯರು ತಮ್ಮ ಹೊಸ ಪರಿಸ್ಥಿತಿಯಲ್ಲಿ ಭ್ರಮನಿರಸನಕ್ಕೊಳಗಾದಾಗ ಇಂತಹ ಕಪಟಿಗಳ ಸಂದರ್ಶನವಾದರೆ ಸುಲಭದಲ್ಲಿ ಬಲಿಬೀಳುತ್ತಾರೆ. ಆ ವ್ಯಕ್ತಿಯ ಪೂರ್ವಾಪರಗಳ ಕುರಿತು ವಿವೇಚಿಸದೇ ಆತನ ಶಿಷ್ಯೆಯರಾಗಿ ಬಿಡುತ್ತಾರೆ. ತಮ್ಮನ್ನು ತಾವು ಸರಿಮಾಡಿಕೊಳ್ಳುವ ಹಂಬಲದಿಂದ ಹೆಂಗಳೆಯರು ಗುರುಗಳ ಸೇವೆ ಮಾಡಲಾರಂಭಿಸುತ್ತಾರೆ, ಕಡೆಗೆ ಸೇವಿಸಲ್ಪಡುತ್ತಾರೆ. ಇದು ಈ ಗುರುಗಳೆಂದೆನಿಸಿಕೊಂಡವರಿಗೆ ಒಳ್ಳೆಯದೇ. ಅವರ ಪೂರ್ವಾಪರಗಳನ್ನು ಕುರಿತು ಪ್ರಶ್ನಿಸದಿರುವುದರಿಂದ ಕಪಟ ಯೋಗಿಗಳ "ನಿತ್ಯ ಸತ್ಯಗಳು" ಬಹಿರಂಗವಾಗುವುದೇ ಇಲ್ಲ. ಆದರೆ ಯಾವುದಾದರೂ ಟಿ.ವಿ. ಚಾನೆಲ್ಲೋ ಅಥವಾ ಪತ್ರಿಕೆಯವರೋ ಇಂತಹ ಗುರುವಿನ ನೈಜ ಜೀವನವನದ ಚಿತ್ರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಾಗ ಪಶ್ಚಾತ್ತಾಪ ಪಡುತ್ತಾರೆ. ಹಾಗಾಗಿ ಮತ್ತೆ ನೊಂದುಕೊಳ್ಳುವುದರ ಬದಲಾಗಿ ಮೊದಲೇ ವಿವೇಚನೆಯಿಂದ, ಯೋಗಿಗಳೆಂದು ಕರೆಸಿಕೊಳ್ಳುವವರ ಮಾತಿನ ಮೋಡಿಗೆ ಮಾರು ಹೋಗದೇ, ಅವರ ಬದುಕಿನ ಸತ್ಯವನ್ನು ಅರಿತೇ ಮುಂದುವರಿಯುವುದು ಒಳಿತಲ್ಲವೇ?
ಅಕ್ಷರ ದಾಮ್ಲೆ

Wednesday, May 5, 2010

ನಾವು ಯಾರಿಗೂ ಕಾಯಬೇಕಾಗಿಲ್ಲ! ನಾವೇ ಕೈ ಜೋಡಿಸೋಣ

ಈ ಲೇಖನವನ್ನು ಪ್ರಕಟಣೆಗಾಗಿ ವಿಜಯ ಕರ್ನಾಟಕ ಪತ್ರಿಕೆಗೆ ಕಳಿಸಿದ್ದೆ. ಆದರೆ ಪ್ರಕಟವಾಗಲಿಲ್ಲ. ಹಾಗಾಗಿ ಈಗ ನನ್ನದೇ ಪ್ರಕಟಣಾ ಮಾಧ್ಯಮವಾದ ಈ ನನ್ನ ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಅನಿಕೆಯನ್ನು ಕಮೆಂಟ್ ಆಗಿ ಬರೆಯಿರಿ.


      ಏಪ್ರಿಲ್ ೨೦ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ರಾಜಶೇಖರ ಗೌಡರ ’ರಾಕೆಟ್ ಮತ್ತೆ ಮೇಲೇರುತ್ತದೆ, ಆದರೆ ನಮ್ಮ ಸ್ವಾಭಿಮಾನ ಮೇಲೇರುವುದು ಯಾವಾಗ?’ ಎಂಬ ಲೇಖನವು ಈ ಬರೆಹಕ್ಕೆ ಇಂಬು ಕೊಟ್ಟಿದೆ. ಹಿರಿಯರು ಹೇಳಿದಂತೆ, ’ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿಗೆ ಅನ್ವರ್ಥವಾಗುವಂತೆ, ನಮಗೆ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಗಳ ಬಗ್ಗೆ ಅಸಡ್ಡೆ ಇರುವುದು ದಿಟವೇ. ಬಹುಷಃ ಇದಕ್ಕೆ ಕಾಅಣ ನಮ್ಮ ತುಲನಾತ್ಮಕ ಮನೋಭಾವ. ಉದಾ: ಭಾರತದಲ್ಲಿ ೩ಜಿ ಗೆ ಬಿಡ್ ಮಾಡುವಾಗ ದೂರದ ಜರ್ಮನಿಯಲ್ಲಿ ೪ಜಿ ಗೆ ಬಿಡ್ ನಡೆಯುತ್ತಿದೆ. ಇದರರ್ಥ ನಮಗಿಂತ ತಂತ್ರಜ್ಞಾನದಲ್ಲಿ ಜರ್ಮನಿ ಮುಂದಿದೆ. ಹಾಗೆಯೇ ಚೀನಾ, ಜಪಾನ್, ಫ್ರಾನ್ಸ್, ಅಮೆರಿಕಾ, ರಷ್ಯಾ ಮುಂತಾದ ದೇಶಗಳೂ ಬಹಳ ಮುಂದೆ ಹೋಗಿವೆ. ರಾಜಶೇಖರರವರೇ ಉಲ್ಲೇಖಿಸಿರುವಂತೆ ಅಲ್ಲದೇ ಹಲವಾರು ಪತ್ರಿಕೆಗಳಲ್ಲಿಯೂ ಪ್ರಕಟವಾಗಿರುವಂತೆ, ೧೯೯೨ರಲ್ಲಿಯೇ ರಷ್ಯಾ ಹಾಗೂ ಅಮೇರಿಕಾಗಳಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಇತ್ತು. ಮೊದಲಿಗೆ ನಾವು ತೊಡಗಿದ್ದು ಆ ತಂತ್ರಜ್ಞಾನವನ್ನು ಕೊಳ್ಳಲು. ಇದು ನಮ್ಮ ಕೊಳ್ಳುಬಾಕ ಸಂಸ್ಕೃತಿಗೆ ದೊಡ್ಡ ಉದಾಹರಣೆ. ಬಹುಷಃ ಅಮೆರಿಕಾ ಈ ಕೊಂಡುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಅಡ್ಡಗಾಲಿಡುವುದಲ್ಲವಾಗಿದ್ದರೆ ನಾವು ಇನ್ನೂ ರಷ್ಯಾದ ತಂತ್ರಜ್ಞಾನವನ್ನು ಬಳಸಿಕೊಂಡು ಅಥವಾ ಅದನ್ನೇ ಸ್ವಲ್ಪ ಅಭಿವೃದ್ಧಿಪಡಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉಪಗ್ರಹಗಳನ್ನು ನಭಕ್ಕೇರಿಸುತ್ತಿದ್ದೆವೋ ಏನೋ! ಆದರೆ ಈಗ ಇಸ್ರೋದ ವಿಜ್ಞಾನಿಗಳೇ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಈ ಬಾರಿ ವಿಫಲವಾಗಿರಬಹುದು. ಸೋಲೇ ಗೆಲುವಿನ ಸೋಪಾನವಲ್ಲವೇ? ಹಾಗಾಗಿ ಸೋಲನ್ನು ಸ್ವೀಕರಿಸಿ, ಜೋಪಾನವಾಗಿ ನಾವು ಮುನ್ನಡೆಯಬೇಕು. ಯಶಸ್ಸಿಗಾಗಿ ಸೆಣಸಾಡಬೇಕು.
    ಆದರೆ ನನ್ನನ್ನು ಮತ್ತೆ ಮತ್ತೆ ಕಾಡುವ ಪ್ರಶ್ನೆ, ವಿದೇಶಗಳಲ್ಲಿ ಯಶಸ್ವಿಯಾಗಿದ್ದ ಒಂದು ತಂತ್ರಜ್ಞಾನದ ಅಭಿವೃದ್ಧಿಗೆ ನಾವು ೧೫ ವರ್ಷ ಬೆವರು ಸುರಿಸಬೇಕಾಯ್ತಲ್ಲ?! ಇದಕ್ಕೆ ಕಾರಣವೇನಿರಬಹುದು? ಪ್ರಾಯಶಃ ಐಟಿ ಯುಗದ ಆರಂಭದ ತರುವಾಯ ಕಡೆಗಣಿತವಾಗಿರುವ ಮೂಲವಿಜ್ಞಾನಗಳ ಅಧ್ಯಯನ. ಸಂಶೋಧನೆಗೆ ಮೂಲವಿಜ್ಞಾನದ ಅಧ್ಯಯನವು ಬಹಳ ಪ್ರಧಾನವಾದುದು. ಆದರೆ ಇಂದಿನ ಯುವಜನತೆ ಐಟಿ ಎಂಬ ಕುದುರೆಯ ಬೆನ್ನೇರಿ, ಹಣ ಗಳಿಕೆಯ ಓಟದಲ್ಲಿದ್ದಾರೆ. ಹಣವನ್ನು ಯಾರೂ ಗಳಿಸಬಹುದು. ಕೆಟ್ಟ ದಾರಿಗಳ ವಿಚಾರ ಬಿಡೋಣ. ಕನಿಷ್ಠ ವಿದ್ಯಾಭ್ಯಾಸವನ್ನು ಹೊಂದಿ, ನ್ಯಾಯಯುತವಾಗಿಯೇ ಹಣಗಳಿಸಿ ಕೋಟ್ಯಧಿಪತಿಗಳಾಗಿರುವ ಅನೇಕರ ಉದಾಹರಣೆಗಳು ಇಂದು ನಮ್ಮ ಮುಂದಿವೆ. ಆದರೆ ವೈಜ್ಞಾನಿಕ ಸಂಶೋಧನೆಯೆಂಬುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಕೋಟ್ಯಧಿಪತಿಯಾಗುವುದಕ್ಕಿಂತಲೂ ಮಿಗಿಲಾದುದು. ಕೋಟ್ಯಧಿಪತಿಯ ಹಣ ಮಕ್ಕಳು, ಮರಿಗಳು ತಿಂದು ಮುಗಿಸುತ್ತಾರೆ. ಆದರೆ ವಿಜ್ಞಾನಿಯ ಸಾಧನೆಯ ಫಲ ಇಡೀ ಸಮಾಜಕ್ಕೆ ಸಿಗುತ್ತದೆ.
       ಶ್ರೀಯುತ ರಾಜಶೇಖರರವರು "ಜನರು ವೈಜ್ಞಾನಿಕ ಸಂಶೋಧನೆಗಳ ಕುರಿತು ಭಾವುಕರಾಗಬೇಕು. ಎಷ್ಟೇ ವಿಫಲವಾದರೂ ಇಸ್ರೋದಲ್ಲಿ ನಂಬಿಕೆ ಇಟ್ಟು ಶುಭ ಹಾರೈಸಬೇಕು. ಆಗ ದೇಶದ ಅಭಿವೃದ್ಧಿಗೆ ದುಡಿಯುವ ಇಸ್ರೋದಂತಹ ನೂರಾರು ಸಂಸ್ಥೆಗಳು ಹುಟ್ಟುತ್ತವೆ. ಅಂಥ ಕಾಲ ಯಾವಾಗ ಬರುತ್ತದೋ ಕಾದು ನೋಡಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿಟವೇ. ಇಂಥ ಆಶಾಭಾವ ನಮ್ಮಲ್ಲಿರಬೇಕು. ಆದರೆ ಯಾರೋ ಮಾಡಲಿ ಅಂತ ಹಾರೈಸುತ್ತಾ ಕಾಯುವುದು ಯಾಕೆ? ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಕುರಿತು ಈಗಲೇ ಪ್ರೇರಣೆ ನೀಡಬೇಕು.       
    ವಿದೇಶಿ ಕಂಪೆನಿಗಳ ಆಳುಗಳಾಗಿ, ವಿದೇಶಿಯರಿಂದ ಆಳಿಸಿಕೊಳ್ಳುತ್ತಾ, ಹಗಲೂ-ರಾತ್ರಿ ಆ ಕಂಪೆನಿಗಳ ಅಭಿವೃದ್ಧಿಗೆ ದುಡಿಯುತ್ತಿರುವ ಲಕ್ಷ ಲಕ್ಷ ಸಾಫ್ಟ್ ವೇರ್, ಹಾರ್ಡ್ ವೇರ್ ಎಂಜಿನಿರುಗಳಿದ್ದೀರಲ್ಲಾ? ಇಸ್ರೋದಂತಹ ಸಂಸ್ಥೆಗಾಗಿಯೋ, ಅಥವಾ ದೇಶದ ರಕ್ಷಣಾ ವಿಭಾಗದಲ್ಲಿಯೋ, ಅಥವಾ ಆಡಳಿತ ಸೇವೆಯಲ್ಲಿಯೋ, ಯಾಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಾರದು? ಇದು ಇಂಜಿನಿಯರುಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ವೈದ್ಯರುಗಳಿಗೂ ಅಥವಾ ವಿದೇಶಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಯಾವುದೇ ವೃತ್ತಿಯವರಿಗೂ ಅನ್ವಯವಾಗಬಹುದು. ಉತ್ತಮ ವೈದ್ಯರುಗಳು ಸರಕಾರಿ ಆಸ್ಪತ್ರೆಗಳಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಸರಕಾರದ ಯೋಜನೆಗಳನ್ನು ಅರ್ಥಪೂರ್ಣವಾಗಿಸಬಹುದು. ಇದಕ್ಕೆ ಬೇಕಾಗಿರುವುದು ನಮ್ಮೆಲ್ಲರ ಮನಃಶಕ್ತಿ. ಇಂದು ತಿಂಗಳಿಗೆ ೫೦ ಸಾವಿರ ಸಂಬಳ ಪಡೆಯುತ್ತಿರುವ ವ್ಯಕ್ತಿ ನಾಳೆ ಹದಿನೈದು, ಇಪ್ಪತ್ತು ಸಾವಿರ ಸಂಬಳಕ್ಕೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಾಗಬಹುದು. ಇಂದು ಕಾರಿನಲ್ಲಿ ಓಡಾಡಿಕೊಂಡಿರುವವನು ನಾಳೆ ಬೈಕ್ ನಲ್ಲಿ ಹೋಗಬೇಕಾಗಬಹುದು. ಬೈಕಿಗೇ ಸೀಮಿತವಾಗಿರುವವನು ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸಬೇಕಾಗಬಹುದು. ಅಷ್ಟೇ ತಾನೇ?! ದೇಶಕ್ಕಾಗಿ ನಾವು ಇಷ್ಟೂ ತ್ಯಾಗ ಮಾಡಲು ಸಿದ್ಧರಿಲ್ಲವೇ?! ಇದರಿಂದ ಬೆಂಗಳೂರಿನಂತಹ ನಗರಗಳಲ್ಲಿ ಕಂಡುಬರುವ ಗಂಟೆಗಟ್ಟಲೆ ಕಾಯಿಸುವ ಟ್ರಾಫಿಕ್ ಜಾಮ್ ಗಳೂ ಕಡಮೆಯಾಗಬಹುದು. ಪರಿಸರದ ಮೇಲೆ ನಾವು ಮಾಡುತ್ತಿರುವ ಹಾನಿಯ ಪ್ರಮಾಣ ಬಹುವಾಗಿ ಕಡಮೆಯಾಗುತ್ತದೆ. ನಾವು ಹಣದ ಲಾಲಸೆಯಿಂದ, ದುಂದುವೆಚ್ಚದ ಸೋಗಿನಿಂದ ಹೊರಬರುವುದಕ್ಕೆ ಸಿದ್ಧರಾಗಬೇಕು ಅಷ್ಟೆ. ಆಗ ಇಸ್ರೋದಂತಹ ನೂರಾರು ಸಂಸ್ಥೆಗಳು ಭಾರತದ ಅಭಿವೃದ್ಧಿಗೆ ದುಡಿಯುವ ಕನಸು ನನಸಾಗುವುದಕ್ಕೆ ಬಹಳ ವರ್ಷ ಕಾಯಬೇಕಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವರ್ತರಾಗೋಣ.