Tuesday, January 25, 2011

ವಿಜ್ಞಾನ ಎಂದರೆ ಅಂಕಗಳಲ್ಲ, ಕಲೆ ಎಂದರೆ ದಡ್ಡತನವಲ್ಲ!!

ಈ ಲೇಖನವು 25 ನೇ ಜನವರಿ, 2011 ರ ಕನ್ನಡಪ್ರಭದ, ಕಾಲೇಜುರಂಗದಲ್ಲಿ ಪ್ರಕಟವಾಗಿದೆ.
 
"ಸರ್, ಮೊನ್ನೆ ಸಂಗೀತ ಕಾರ್ಯಕ್ರಮ ಇತ್ತು. ಹಾಗಾಗಿ ಕ್ಲಾಸ್ ಗೆ ಬರ್ಲಿಕ್ಕಾಗ್ಲಿಲ್ಲ" ಅಂತ ಅಧ್ಯಾಪಕರ ಹತ್ತಿರ ರಜಾರ್ಜಿಯನ್ನು ತೆಗೆದುಕೊಂಡು ಹೋದರೆ, "ಹಮ್. ನಿಮ್ಮದು ಯಾವಾಗ ನೋಡಿದ್ರೂ ಇದ್ದದ್ದೆ. ನೀವು ಸೈನ್ಸ್ ಸ್ಟೂಡೆಂಟ್ ಅಲ್ವಾ? ಹಾಗಿದ್ದ ಮೇಲೆ ನಿಮ್ಮದೆಂತದ್ದು ಸಂಗೀತ ಅಂತೆಲ್ಲ? ನೀವು ಹಾಗೆಲ್ಲಾ ಹೋದರೆ ಸೈನ್ಸ್ ನಲ್ಲಿ ಮಾರ್ಕ್ ತೆಗಿಲಿಕ್ಕಾಗುದಿಲ್ಲ. ಸ್ವಲ್ಪ ಸೀರಿಯಸ್ ಆಗಿ ಓದಬೇಕು. ಸೈನ್ಸ್ ಕಲಿಯುವುದು ಸುಲಭವಲ್ಲ. ಹೀಗೆ ಮಾಡಿದ್ರೆ ಮುಂದೆ ತುಂಬಾ ಕಷ್ಟ ಉಂಟು. ಗೊತ್ತಾಯ್ತಲ್ಲ. ಇನ್ನಾದ್ರು ಸಂಗೀತ ಅಂತೆಲ್ಲಾ ಕ್ಲಾಸ್ ತಪ್ಪುವುದನ್ನು ಸ್ವಲ್ಪ ಕಡಮೆ ಮಾಡಿ" ಬೋಧನೆಯ ಮಳೆಗರೆದರು. ಇದು ನನಗೆ ಹಲವು ಬಾರಿ ಹೇಳಿದ ಮಾತೇ. ಪ್ರತಿ ಬಾರಿಯೂ ನಾನು ಈ ರೀತಿ ಹೇಳಿಸಿಕೊಂಡಾಗಲೂ, ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ, ’ಇವರುಗಳು ಯಾಕೆ ಈ ರೀತಿ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ’ ಅಂತ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಅದೆಷ್ಟು ವಿಷಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೆವು?! ಆ ನಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರು ನಮಗೆ ನೀಡುತ್ತಿದ್ದ ಪ್ರೋತ್ಸಾಹವೇನು?! ವೇದಿಕೆಗೆ ಹತ್ತಲಾರೆ ಅಂತ ಮುದುಡಿ ಕುಳಿತವನಿಗೂ ಧೈರ್ಯ ತುಂಬಿ ವೇದಿಕೆಯ ಮೇಲೆ ಬರುವಂತೆ ಮಾಡುವ, ಅವನಲ್ಲಿರುವ ಸಭಾ ಕಂಪನವನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಪ್ರೌಢ ಶಾಲಾ ಹಂತಕ್ಕೆ ಬರುವಾಗ, ನಮ್ಮನ್ನು ಚಟುವಟಿಕೆಗಳಿಗೆ ಎಳೆದು ತರುವಷ್ಟರ ಮಟ್ಟಿಗೆ ಶಿಕ್ಷಕರು ಆಸಕ್ತಿ ತೋರದಿದ್ದರೂ, ತಮ್ಮ ವಿದ್ಯಾರ್ಥಿಯಲ್ಲಿರುವ ಪ್ರತಿಭೆಗೆ ನೀರೆರೆಯುವುದಕ್ಕಂತೂ ಖಂಡಿತಾ ಹಿಂಜರಿಯುತ್ತಿರಲಿಲ್ಲ. ಸ್ಪರ್ಧೆಗಳಿಗೆ ಹೋಗಿ ವಿದ್ಯಾರ್ಥಿಗೆ ಪಾಠಗಳು ತಪ್ಪಿ ಹೋಗಿದ್ದರೆ, ಅವನನ್ನು ಪ್ರತ್ಯೇಕ ಕರೆದು ಪಾಠ ಮಾಡುವ ಮನಸ್ಸನ್ನು ತೋರಿಸುತ್ತಿದ್ದರು. ಆದರೂ ಎಷ್ಟೋ ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿಗೆ ತಲುಪುವಾಗ ಓದಿನ ನೆಪದಲ್ಲಿ ತಮ್ಮ ಇತರೆಲ್ಲಾ ಪಠ್ಯೇತರ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಾರೆ. ಒಂದು ವೇಳೆ ಸ್ಥಗಿತಗೊಳಿಸದೇ ಮುಂದುವರೆಸಿದರೆ, ಪಿ.ಯು.ಸಿ. ಯಲ್ಲಿ ಆತ ವಿಜ್ಞಾನ ವಿಷಯವನ್ನು ಆರಿಸಿಕೊಂಡರೆ ಸಾಕು. ನಂತರ ಅಧ್ಯಾಪಕರೇ "ನೀನಿನ್ನು ಅವುಗಳಿಗೆಲ್ಲಾ ಹೋದದ್ದು ಸಾಕು. ಮನೆಯಲ್ಲಿ ಕೂತು ಓದು ಅಂತ ಮೊದಲಾಗಿ" ಉಪದೇಶ ನೀಡುತ್ತಾರೆ. ಅವರ ಮಾತನ್ನೇ ನಂಬಿದ ಎಷ್ಟೋ ಮಂದಿ ವಿದ್ಯಾರ್ಥಿಗಳನ್ನು ಓದಿಗೆ ಸೀಮಿತಗೊಳಿಸಿಬಿಡುತ್ತದೆ. ಮುಂದೆ ಸಾಗಿ, ಬಿ.ಎಸ್ಸಿ. ಅಥವಾ ಇನ್ನಿತರ ವೈಜ್ಞಾನಿಕ ವಿಷಯಕ್ಕೆ ಸಂಬಂಧಿಸಿದ ಪ್ರೊಫೆಷನಲ್ ಕೋರ್ಸ್ ಗೆ ಸೇರಿಕೊಂಡರೆ ಮತ್ತೆ ಅಲ್ಲಿ ಹೆಚ್ಚಿನ ವಿಜ್ಞಾನ ಶಿಕ್ಷಕರು ಬೋಧಿಸುವುದು ಇದನ್ನೇ. "ಓದಿ, ಮಾರ್ಕ್ ತೆಗೆಯಿರಿ. ನಿಮ್ಮ ಸಂಗೀತ, ಭರನಾಟ್ಯ ಎಲ್ಲ ಮತ್ತೆ ಮಾಡಬಹುದು" ಎಂದು. ಅವರ ಮಾತನ್ನು ಮೀರಿ ವಿದ್ಯಾರ್ಥಿಯು ಇತರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಮೇಲೆ ಹೇಳಿದಂತೆ ತಿಳಿ ಹೇಳುತ್ತಾರೆ. ಕೇಳದಿದ್ದರೆ ಬೈಯ್ಯುವುದಕ್ಕಾರಂಭಿಸುತ್ತಾರೆ. ಇತರ ವಿದ್ಯಾರ್ಥಿಗಳ ಮುಂದೆ "ನೀನು ವಿಜ್ಞಾನ ಕಲಿಯುವುದಕ್ಕೆ ಯಾಕೆ ಬಂದದ್ದು? ನೀನು ಅದನ್ನೇ ಕಲಿಯುವುದಕ್ಕೆ ಹೋಗಬೇಕಿತ್ತು" ಅಂತ ಗೇಲಿ ಮಾಡುತ್ತಾರೆ.
ಹಾಗಿದ್ದರೆ ಇದರರ್ಥವೇನು? ವಿಜ್ಞಾನ ಕಲಿಯುವವನು ವಿಜ್ಞಾನಕ್ಕೆ ಸೀಮಿತವಾಗಿರಬೇಕೆಂದೇ? ಸ್ಪೆಷಲೈಜೇಷನ್ ಮಾಡುವುದೆಂದರೆ, ನಮ್ಮನ್ನು ಇತರ ವಿಷಯಗಳಿಂದ ವಿಮುಖರಾಗಿಸಿಕೊಳ್ಳುವುದೆಂದೇ? ವಾಸ್ತವವಾಗಿ ವಿಜ್ಞಾನದೊಂದಿಗೆ ಇತರ ಯಾವುದಾದರೂ ಒಂದು ಹವ್ಯಾಸ ಇದ್ದರೆ ಅದು ನಮ್ಮನ್ನು ಹೆಚ್ಚು ಕಾರ್ಯಶೀಲರನ್ನಾಗಿಸುತ್ತದೆ. ಸಮಾಜದೊಂದಿಗೆ ಒಡನಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ನಮ್ಮಲ್ಲಿನ ಸಭಾ ಕಂಪನವನ್ನು ಹೋಗಲಾಡಿಸುವುದಕ್ಕೆ ಒಂದು ಉತ್ತಮ ದಾರಿಯನ್ನು ಒದಗಿಸುತ್ತದೆ. ನಮ್ಮನ್ನು ಹಲವಾರು ಮಂದಿಗೆ ಪರಿಚಿತರನ್ನಾಗಿಸುತ್ತದೆ. ವ್ಯಕ್ತಿಯ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುತ್ತದೆ. ನಮಗೆಲ್ಲರಿಗೂ ಸುಲಭವಾಗಿ ಉದಾಹ್ಹರಣೆಗೆ ಸಿಗುವುದು ನಾವೆಲ್ಲರೂ ಗೌರವಿಸುವ ಡಾ. ಅಬ್ದುಲ್ ಕಲಾಮ ಅವರು. ಅವರೆಷ್ಟು ಶ್ರೇಷ್ಠ ವಿಜ್ಞಾನಿಯೋ, ಅಷ್ಟೇ ಶ್ರೇಷ್ಠ ಸಂಗೀತಾಸ್ವಾದಕ. ಅವರಷ್ಟೇ ಅಲ್ಲ. ವಿಶ್ವವಿಖ್ಯಾತ ವಿಜ್ಞಾನಿಯಾದ ಐನ್ ಸ್ಟೀನ್ ಅವರು ವಯೊಲಿನ್ ವಾದನವನ್ನು ತಮ್ಮ ಹವ್ಯಾಸವಾಗಿಸಿಕೊಡಿಂದ್ದರು. ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಸರ್. ಸಿ.ವಿ.ರಾಮನ್ ರವರು ತಮ್ಮ ಪತ್ನಿಯಿಂದ ಸಂಗೀತಾಭ್ಯಾಸವನ್ನು ಮಾಡುತ್ತಿದ್ದವರು. ಅಷ್ಟೇ ಏಕೆ? ೨೦೦೯ರಲ್ಲಿ ನೊಬೆಲ್ ಪಡೆದ ವೆಂಕಟರಾಮನ್ ಅವರು ತಮ್ಮ ಮಗ ರಾಮನ್ ರಾಮಕೃಷ್ಣನ್ ಅವರನ್ನು ಸಂಗೀತಗಾರನನ್ನಾಗಿ ರೂಪಿಸಿರುವುದು ಅವರಲ್ಲಿರುವ ಸಂಗೀತದ ಆಸಕ್ತಿಗೆ ಕನ್ನಡಿಯಾಗಿದೆ.     ಹಾಗಾಗಿ, ನಾನು ಅಧ್ಯಾಪಕರುಗಳಲ್ಲಿ ವಿಜ್ಞಾಪಿಸುವುದೇನೆಂದರೆ "ದಯವಿಟ್ಟು, ವಿಜ್ಞಾನದ ವಿದ್ಯಾರ್ಥಿಗಳಿಗೂ ಇತರ ವಿಷಯಗಳಲ್ಲಿ ಪ್ರೋತ್ಸಾಹಿಸುವುದಕ್ಕೆ ಅವಕಾಶ ಕೊಡಿ". ಮತ್ತು ನನ್ನ ಗೆಳೆಯರಿಗೆಲ್ಲಾ ಸಲಹೆ ನೀಡುವುದೇನೆಂದರೆ, "ನಿಮ್ಮಲ್ಲಿರುವ ಪ್ರತಿಭೆಯನ್ನು ಖಂಡಿತವಾಗಿಯೂ ಬೆಳೆಸಿಕೊಳ್ಳಿ. ಅದು ನಿಮಗೆ ಬದುಕಿನ ದಾರಿಯನ್ನು ನೀಡದಿದ್ದರೂ, ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ವಿಜ್ಞಾನಿಗಳಾಗಿ. ಆದರೆ ಇತರ ವಿಷಯಗಳಲ್ಲಿ ಅಜ್ಞಾನಿಗಳಾಗಬೇಡಿ".  

5 comments:

  1. ಖಂಡಿತವಾಗಿಯೂ ಹೌದು ಅಕ್ಷರ.... ಯಾವುದೇ ವಿದ್ಯೆಯಾದರೂ ಕೂಡ ಕೇವಲ ಅಂಕಗಳಿಕೆ ಮತ್ತು ಅರ್ಥ ಗಳಿಕೆಗಳಿಗೆ ಮೀಸಲಾಗದೆ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಬೇಕು. ಕಲೆ ಅಥವಾ ಯಾವುದೇ ಹವ್ಯಾಸ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ತುಂಬಾ ಅವಶ್ಯಕ. ನೀನು ಹೇಳಿದಂತೆ ಎಲ್ಲ ಅಧ್ಯಾಪಕರೂ/ಉಪನ್ಯಾಸಕರೂ ಮತ್ತು ಹೆತ್ತವರು/ಪಾಲಕರು ಇದರ ಬಗ್ಗೆ ಗಮನಕೊಡಬೇಕು.

    ReplyDelete
  2. really....true. as parent ನಾವು ನಮ್ಮ ಮಗಳಿಗೆ ಆರ್ಟ್ ಗೆ ಪಾಠ ಕ್ಕೆ ಸಮ ಪ್ರಾಮುಕ್ಯತೆ ಕೊಡುತ ಬಂದಿದೇವೆ .ಅವಳು 2nd p u nalli ಇದ್ದಾಗ ಅದೂ ನವೆಂಬೆರ್ ತಿಂಗಳಲ್ಲಿ ಅವಳ ಸೋಲೋ ಭರತನಾಟ್ಯ ಗುರುವಂದನೆ ಕಾರ್ಯಕ್ರಮ ನೀಡಿದ್ದಾಳೆ . ತುಂಬಾ ಜನ ನಮಗೆ "ಏನ್ರಿ 2nd p u " marthra ಹೇಳಿ ಕೇಳಿದ್ಡಾ ರೆ .... now she is studing in "pesschool of eng " art forms ಯಾವತ್ಹೂ edu ಗೆ ಹೆಲ್ಪ್ ಮಾಡುತದೆ . acc to me it incresses memory power even in 2nd B .E she is going to carnatic classical music and bharthanatym

    ReplyDelete
  3. really true..........ಹೆತ್ಹವರಾಗಿ ನಾವು ನಮ್ಮ ಮಗಳಿಗೆ ಆರ್ಟ್ ಗೆ ಪಾಠ ಕ್ಕೆ ಸಮ ಪ್ರಾಮುಕ್ಯತೆ ಕೊಡುತ ಬಂದಿದೇವೆ .ಅವಳು 2nd p u nalli ಇದ್ದಾಗ ಅದೂ ನವೆಂಬೆರ್ ತಿಂಗಳಲ್ಲಿ ಅವಳ ಸೋಲೋ ಭರತನಾಟ್ಯ ಗುರುವಂದನೆ ಕಾರ್ಯಕ್ರಮ ನೀಡಿದ್ದಾಳೆ . ತುಂಬಾ ಜನ ನಮಗೆ "ಏನ್ರಿ 2nd p u " marthra ಹೇಳಿ ಕೇಳಿದ್ಡಾ ರೆ .... now she is studing in "pesschool of eng " art forms ಯಾವತ್ಹೂ edu ಗೆ ಹೆಲ್ಪ್ ಮಾಡುತದೆ . acc to me it incresses memory power even in 2nd B .E she is going to carnatic classical music and bharthanatym

    ReplyDelete