Thursday, November 8, 2018

ಹೊಸಕಿ ಹೋದ ಹೂವುಗಳ ಹೋರಾಟ - ಅಮ್ಮಚ್ಚಿಯೆಂಬ ನೆನಪು

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಆಸೆ ಆಕಾಂಕ್ಷೆಗಳಿಗೆ ಹೇಗೆ ಸ್ಥಾನವೇ ಸಿಗುವುದಿಲ್ಲ  ಮತ್ತು ಅವುಗಳನ್ನು ಪಡೆಯುವುದಕ್ಕೆ  ಹೇಗೆ ಕೆಲವು ಹೆಣ್ಣುಮಕ್ಕಳು ಧೈರ್ಯದಿಂದ ಮುನ್ನುಗ್ಗುತ್ತಾರೆ ಎಂಬುದು ಸಿನಿಮಾದ ಕಥಾ ವಸ್ತು. ತನಗೆ ಇಷ್ಟವಾಗುವ ಹುಡುಗನನ್ನೇ ಮದುವೆಯಾಗುತ್ತೇನೆ ಎಂಬುದು ಅಮ್ಮಚ್ಚಿಯ ದಿಟ್ಟ ನಿಲುವಾದರೆ, ತನ್ನನ್ನು ಮದುವೆ ಮಾಡಿಕೊಂಡವನು ತನ್ನನ್ನು ಸ್ವೀಕರಿಸಿಲ್ಲ ಎಂಬುದು ಅಕ್ಕುವಿನ ತೊಳಲಾಟ! ಮದುವೆಯಾದ ಹೊಸತರಲ್ಲೇ ವೈಧ್ಯವ್ಯ ಬಂದು ಸಮಾಜದ ಕೆಟ್ಟ ದೃಷ್ಟಿಗೆ ಗುರಿಯಾದ ಪುಟ್ಟಮ್ಮತ್ತೆಯ ಜೀವನ ಇನ್ನೊಂದು ಹೋರಾಟ! ಹೀಗೆ ಮೂರು ಕಥೆಗಳನ್ನು ಆಧರಿಸಿದ ಚಿತ್ರದಲ್ಲಿ ಮೂರು ಕಥಾ ನಾಯಕಿಯರಿದ್ದಾರೆ. ಮೂವರೂ ತಮ್ಮದೇ ಆದ ರೀತಿಯಲ್ಲಿ ಮೂರು ಆಯಾಮಗಳನ್ನು ಕೊಡುತ್ತಾರೆ. ಜೊತೆಗೆ ಇವೆಲ್ಲವೂ ಒಂದು ಸುಂದರ ಕಥೆಯಾಗಿ ಪೋಣಿಸಲ್ಪಟ್ಟಿದೆ.  

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಳ್ಳಿಯ ಪರಿಸರದ ಸೊಗಡನ್ನು ಹೊಂದಿರುವ ಚಿತ್ರವು ನಮ್ಮನ್ನು 80 - 90 ದಶಕಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವೇ ಇಲ್ಲ! ಹಳೆಯ ಕಾಲದ ಮನೆ, ಕಡೆಯುವ ಕಲ್ಲು, ಬೀಸುವ ಕಲ್ಲು, ಚೆನ್ನೆಮಣೆ ಆಟ, ತಾಮ್ರದ ಪಾತ್ರೆಗಳು, ಸೌದೆ ಉರಿಸುವ ಒಲೆ ಹೀಗೆ ಅನೇಕ ಹಳೆಯ ಕಾಲದ (ಈಗಿನ ತಲೆಮಾರಿನ ನಗರದ ಮಕ್ಕಳಿಗೆ ಉಹೆಗೂ ನಿಲುಕದ) ಅಂಶಗಳನ್ನು ಬಹಳ ಅಚ್ಚುಕಟ್ಟಾಗಿ ಬಿಂಬಿಸಲಾಗಿದೆ

ಅಮ್ಮಚ್ಚಿ, ಅಕ್ಕು ಹಾಗೂ ಪುಟ್ಟಮ್ಮತ್ತೆ, ಮೂವರೂ ಯೌವನದ ಆಸೆ ಆಕಾಂಕ್ಷೆಗಳು, ತಮ್ಮದೇ ಆದ ಕನಸುಗಳನ್ನು ಉಳ್ಳವರು. ಅವುಗಳನ್ನು ವ್ಯಕ್ತಪಡಿಸಿದ ಅಮ್ಮಚ್ಚಿ ಸೊಕ್ಕಿನವಳಾಗಿ, ಅಕ್ಕು ಹುಚ್ಚಿಯಾಗಿ ಮತ್ತು ಮುತ್ತಮ್ಮತ್ತೆ ನರೆದವಳಾಗಿ ಸಮಾಜಕ್ಕೆ ಕಂಡುಬರುತ್ತದೆ. ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಹೆಣ್ಣಿಗೆ ಯಾಕಿಲ್ಲ ಎಂಬುದು ಮೂವರ ಜೀವನದಲ್ಲೂ ಪ್ರಶ್ನೆಯಾಗಿಯೇ ಉಳಿಯುತ್ತದೆ ಎನ್ನುವುದು 80 ದಶಕದ ಕಾಲಘಟ್ಟದ ಸಮಾಜದ ಪ್ರತಿಫಲನವಾಗುತ್ತದೆ. ಪುರುಷ ಪ್ರಧಾನ ಅಷ್ಟೇ ಅಲ್ಲ, ಪುರುಷ ಪ್ರಭುತ್ವವಿರುವ ಸಮಾಜ ಹೆಣ್ಣಿನ ಜೀವನದಲ್ಲಿ ಎಷ್ಟೆಲ್ಲ ಮೂಗು ತೂರಿಸುತ್ತದೆ ಮತ್ತು ಅವು ಹೆಣ್ಣಿನ ಮನದಲ್ಲಿ ಯಾವ ರೀತಿ ಅಸಹಾಯಕ, ಬೀಭತ್ಸ, ರೌದ್ರ, ಕರುಣಾ ಭಾವನೆಗಳನ್ನು ಉಂಟು ಮಾಡುತ್ತವೆ ಜೊತೆಗೆ ಅವ್ಯಾವುದಕ್ಕೂ ಎಲ್ಲೂ ಪ್ರಕಟಣೆಗೆ ಜಾಗವಿಲ್ಲದೆ ಉಸಿರುಗಟ್ಟಿಸುವ ಪರಿಸ್ಥಿತಿಗೆ ದೂಡುತ್ತದೆ ಎಂಬುದನ್ನು ನಿರ್ದೇಶಕಿ ಚಂಪಾ ಶೆಟ್ಟಿ ಅವರು ಲೇಖಕಿ ವೈದೇಹಿಯವರ ಆಶಯಕ್ಕೆ ತಕ್ಕಂತೆಯೇ ಮನಮುಟ್ಟುವಂತೆ ನಿರೂಪಿಸಿದ್ದಾರೆ

ಜೀವನದಲ್ಲಿ ಆಘಾತದ ಮೇಲೆ ಆಘಾತ ಬಂದ ಪುಟ್ಟಮ್ಮತ್ತೆಗೆ ಹೇಗೆ ಒಬ್ಬಾಕೆ ಆಶ್ರಯ ಕೊಡುತ್ತಾಳೆ ಮತ್ತು ಆಕೆಯ ಮನೆಗೆ ಪುಟ್ಟಮ್ಮತ್ತೆ ತೋರುವ ನಿಷ್ಠೆ ಇಂದಿನ ದಿನದಲ್ಲಿ ಬಹಳ ಅಪರೂಪವಾಗಿದೆ ಅಥವಾ ಕಣ್ಮರೆಯಾಗಿದೆ ಅಂದರೂ ತಪ್ಪಾಗಲಾರದು. ಮೌಲ್ಯವನ್ನು ಮುದಿ ವಯಸ್ಸಿನ ಪುಟ್ಟಮ್ಮತ್ತೆ ಬಹಳ ಸೂಕ್ಷ್ಮವಾಗಿ ತಿಳಿಸುತ್ತಾಳೆ







ಮಾನಸಿಕ ಅಸ್ವಸ್ಥತೆ ಮತ್ತು ಅದರ ಕುರಿತು ಇರುವ ಅಲಕ್ಷ್ಯವನ್ನು ಮಾರ್ಮಿಕವಾಗಿ ಚಿತ್ರದಲ್ಲಿ ನಿರೂಪಿಸಿದ್ದಾರೆ. ಮಾನಸಿಕ ಅಸ್ವಸ್ಥರನ್ನು ಅನಾಯಾಸವಾಗಿ ಬಲಿಪಶುಗಳನ್ನಾಗಿ ಮಾಡುವ, ಅವರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುವಅವರನ್ನು ಸಮಾಜದಿಂದ ಅಡಗಿಸುವ ಅಲ್ಲದೆ ಅದರ ಕುರಿತು ಸಂಪೂರ್ಣ ಋಣಾತ್ಮಕ ಭಾವ ಹೊಂದಿರುವ ಮನಸ್ಥಿತಿಯು 80 ದಶಕದ ಕಥೆಯಾಗಷ್ಟೇ  ಉಳಿಯದೆ ಈಗಿನ ಪರಿಸ್ಥಿತಿಯ ನೈಜ ಚಿತ್ರಣವಾಗಿಯೂ ಕಾಣುತ್ತದೆ

ಕಾಕತಾಳೀಯವೋ ಎಂಬಂತೆ ಸಿನೆಮಾದಲ್ಲಿ ಇನ್ನೊಂದು ವಾರದಲ್ಲಿ ಬರಲಿರುವ ದೀಪಾವಳಿಯನ್ನು ವಾಯು ಮಾಲಿನ್ಯವನ್ನುಂಟು ಮಾಡುವ ಸಿಡಿ ಮದ್ದುಗಳಿಲ್ಲದೆಯೂ ಸಂಭ್ರಮದಿಂದ ಆಚರಿಸಲು ಸಾಧ್ಯವಿದೆ ಎಂಬುದಕ್ಕೆ ಒಂದು ಉತ್ತಮ ಮಾದರಿ ಸಿಗುತ್ತದೆ.
    
ಜೊತೆಗೆ ಬಲಿ ಪಾಡ್ಯಮಿ, ತೊಟ್ಟಿಲು ಪೂಜೆಯಂತಹ ಆಚರಣೆಗಳನ್ನೂ ಸುಂದರವಾಗಿ ಚಿತ್ರದಲ್ಲಿ ತೋರಿಸಲಾಗಿದೆ

ಒಂದು ಮೊಟ್ಟೆಯ ಕಥೆಯ ದುರಂತ ನಾಯಕನ ಪಾತ್ರ ಮಾಡಿದ ರಾಜ್ ಬಿ ಶೆಟ್ಟಿ ಅವರು ಇಲ್ಲಿ ದುರಂತ ಖಳ ನಾಯಕನಾಗಿ ಕಂಡು ಬರುತ್ತಾರೆ. ಎರಡೂ ಕಡೆಯೂ "ಬೋಳು ಮಂಡೆ ಕಾಕ" ಎನ್ನುವುದಷ್ಟೇ ಸಾಮ್ಯತೆ

ಮದುವೆಯೆಂಬುದು ಅನೇಕರಿಗೆ ಸಂತಸದ ವಿಚಾರವಾದರೂ, ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ವ್ಯಕ್ತಿಗಳಿಗೆ ಅದು ಮುಳುವಾಗುತ್ತದೆ ಎಂಬುದು ದೃಶ್ಯದಲ್ಲಷ್ಟೆ ಅಲ್ಲದೆ, ಸಂಗೀತದಲ್ಲೂ ಸಿಂಧು ಭೈರವಿ ರಾಗದ ಪ್ರಯೋಗದೊಂದಿಗೆ ಬಹಳ ಉತ್ತ್ತಮವಾಗಿ ಮೂಡಿ ಬಂದಿದೆ.  

ಯಾವುದೇ ಒಂದು ಸಿನೆಮಾಗೆ ಅದರ ಕಥಾ ವಸ್ತುವಷ್ಟೆ ಅಲ್ಲ, ಕಥೆಯೂ ಗಟ್ಟಿಯಾಗಿದ್ದಾಗಲೇ ಅದು ಮನಸ್ಸಿಗೆ ನಾಟುತ್ತದೆ, ಸ್ಮೃತಿ ಪಟಲದಲ್ಲಿ ನೆಲೆಯೂರುತ್ತದೆ. ಉತ್ತಮವಾದ ಕಥೆ ಹಾಗೂ ಕಥಾ ವಸ್ತುವಿನ ಜೊತೆಗೆ, ಅನೇಕ ಸಂದೇಶಗಳನ್ನು ಚಿತ್ರ ಕೊಡುತ್ತದೆ. ಕುಂದಾಪುರ ಕನ್ನಡದ ಬಳಕೆಯು ಮನಸ್ಸಿಗೆ ಆಪ್ತವೆನಿಸುತ್ತದೆ. ಕೆಲವೊಂದು ಪದ ಪ್ರಯೋಗಗಳು ಕುಂದಾಪುರೇತರರಿಗೆ ಅರ್ಥವಾಗದೇ ಹೋಗಬಹುದಾದರೂ, ಅದೆಲ್ಲಿಯೂ ತೊಡಕಾಗಿ ಕಾಣಿಸುವುದಿಲ್ಲ.    

ಅಮ್ಮಚ್ಚಿಯು ವೀರ ವನಿತೆಯಾಗಿ ಕಾಣಿಸಿಕೊಳ್ಳುವ ಕೊನೆಯ ಭಂಗಿ ಇತ್ತೀಚೆಗೆ ನಡೆಯುತ್ತಿರುವ #metoo ಅಭಿಯಾನದ ಹಿಂದಿನ ವರ್ಷನ್ ಆಗಿ ಕಾಣಿಸುತ್ತದೆ

ಕಲಾತ್ಮಕ ಹಾಗೂ ಕಮರ್ಷಿಯಲ್ ಚಿತ್ರಗಳ ನಡುವಿನ ಬೆಸುಗೆಯಾಗಿರುವ ಚಿತ್ರವು ಪ್ರೇಕ್ಷಕರನ್ನು ಆರಂಭದಿಂದ ಕೊನೆಯವರೆಗೂ ಹಿಡಿದಿಡುತ್ತದೆ. ಕಥೆಗಾರ್ತಿ ಅಲ್ಲಲ್ಲಿ ನಿರೂಪಕಿಯಾಗಿಯೂ ಕಾಣಿಸಿಕೊಳ್ಳುವುದೂ ಕೂಡಾ ಚಿತ್ರದ ವೈಶಿಷ್ಠ್ಯಪಂಡಿತ್ ಕಾಶೀನಾಥ್ ಪತ್ತಾರ್ ಅವರು ಚಿತ್ರಕ್ಕೆ ಉತ್ತಮ ಸಂಗೀತವನ್ನು ನೀಡಿದ್ದಾರೆ

ಚಿತ್ರ ಮುಗಿದು ಹೊರಬರುವಾಗ ಒಂದಷ್ಟು ವಿಷಯಗಳನ್ನು ಅವಲೋಕಿಸಿದ, ಅರಗಿಸಿದ ಮತ್ತು ಪ್ರತಿಫಲಿಸಿದ ಅನುಭವವಾಗುತ್ತದೆ




ಅಕ್ಷರ ದಾಮ್ಲೆ  

No comments:

Post a Comment