Wednesday, December 19, 2012

ಈ ಯೋಚನೆ ಹೇಗೆ ಹೊಳೆಯಿತು?


ಸಣ್ಣವನಿರುವಾಗಿಂದಲೇ ಕಾಂಕ್ರೀಟು ಹಾಕುವಾಗ ಅದರ ಮಧ್ಯದಲ್ಲಿ ಕಬ್ಬಿಣದ ಸರಳುಗಳನ್ನಿಡುವುದನ್ನು ನೋಡಿ ಗೊತ್ತಿತ್ತು. ಅದು ಯಾಕೆ ಅಂತ ಅಪ್ಪನಲ್ಲಿ ಕೇಳಿದ್ದಾಗ "ಅದು ಕಾಂಕ್ರೀಟಿಗೆ ಬಲ ಕೊಡುತ್ತದೆ" ಅಂತ ಉತ್ತರವೂ ಸಿಕ್ಕಿತ್ತು. ಅದು ಹೇಗೆ ಬಲ ಕೊಡುತ್ತದೆ ಅನ್ನುವುದನ್ನು ನಾನು ಅನ್ವೇಷಿಸುವುದಕ್ಕೆ ಹೋಗಲಿಲ್ಲ. ಯಾಕೆಂದರೆ ಉತ್ತರ ಸಿಕ್ಕಿದ್ದಲ್ಲಿಗೇ ನನ್ನ ಕುತೂಹಲ ತಣಿದಿತ್ತು. ದೊಡ್ಡವನಾದ ಮೇಲೂ ಈ ಸರಳು ಇಡುವ ಯೋಚನೆ ಹೇಗೆ ಹೊಳೆದಿರಬಹುದು ಅಂತ ನಾನು ಯೋಚಿಸುವುದಕ್ಕೆ ಹೋಗಿರಲಿಲ್ಲ. ಎಷ್ಟೆಷ್ಟೋ ವರ್ಷಗಳಿಂದ ಕಬ್ಬಿಣವನ್ನು ಬಳಸಿಕೊಂಡು ಬರುತ್ತಿದ್ದಾರೆ, ಹಾಗಾಗಿ ಅದರ ಮೂಲ ಹುಡುಕುವುದು ಕಷ್ಟ. ಅಥವಾ ಹುಡುಕಿ ನಾನು ಸಾಧಿಸುವಂಥದ್ದೇನೂ ಇಲ್ಲ! ಅಂತ ಬಿಟ್ಟುಬಿಟ್ಟಿದ್ದೆ.
ಇತ್ತೀಚೆಗೆ ನಾಲ್ಕೈದು ಬಾಲವಾಡಿ ಮಕ್ಕಳ ಗುಂಪೊಂದು ಮರಳಿನಲ್ಲಿ ಆಟವಾಡುವುದನ್ನು ನೋಡಿ ಏನು ಆಡುತ್ತಿದ್ದಾರೆ ಅಂತ ನೋಡುವ ಕುತೂಹಲವಾಯಿತು. ನನ್ನ ಬಾಲ್ಯದಲ್ಲಿಯೂ ನಾನು ಮತ್ತು ಗೆಳೆಯರು ಸೇರಿಕೊಂಡು ಮರಳಿನಲ್ಲಿ ಬೇಕಾದಷ್ಟು ಆಟವಾಡಿದ್ದೆವು. ಮರಳನ್ನು ರಾಶಿ ಹಾಕಿ ಬೆಟ್ಟಗಳನ್ನು ಮಾಡುವುದು, ಅದರೊಳಗೆ ಸುರಂಗ ಕೊರೆಯುವುದು, ಆ ಬೆಟ್ಟದ ಮೇಲೆ ಒಂದಷ್ಟು ಸಣ್ಣ ಕುರುಚಲು ಗಿಡಗಳನ್ನು ನೆಡುವುದು, ಬೆಟ್ಟದ ಮೇಲೆ ರಸ್ತೆಗಳನ್ನು ಮಾಡುವುದು ಹೀಗೇ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಈ ಮಕ್ಕಳೂ ಅಂಥದ್ದೇ ಒಂದು ಪ್ರಯತ್ನದಲ್ಲಿದ್ದರು. ಒಂದು ದೊಡ್ಡ ಬೆಟ್ಟ ತಯಾರಾಗಿ ನಿಂತಿತ್ತು. ಅದನ್ನು ಶೃಂಗರಿಸುವ ಕಾರ‍್ಯ ಶುರುವಾಗಬೇಕಿತ್ತು. ಈಗಿನ ಮಕ್ಕಳ ಬೆಟ್ಟದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ನೋಡುವ ಅಂತ ಕುತೂಹಲದಿಂದ ಗಮನಿಸುತ್ತಿದ್ದೆ. ಒಬ್ಬ ಹುಡುಗನಿಗೆ ಅದರ ಮೇಲೆ ಗಿಡ ನೆಡುವ ಯೋಚನೆ ಬಂತು. ಹತ್ತಿರದಲ್ಲೇ ಒಂದು ಕುರುಚಲು ಸಸ್ಯ ಇತ್ತು. ಕೈಯಲ್ಲಿ ಕೀಳುವುದಕ್ಕೆ ಪ್ರಯತ್ನಿಸಿದ. ಬರಲಿಲ್ಲ. ಆಚೆ ಈಚೆ ಹುಡುಕುವುದಕ್ಕೆ ತೊಡಗಿದ. ಏನು ಹುಡುಕುತ್ತಾ ಇದ್ದಿ ಅಂತ ಪ್ರಶ್ನಿಸಿದೆ. ಆಗ ಹೇಳಿದ "ಇಲ್ಲಿ ಒಂದು ಸಣ್ಣ ಕಬ್ಬಿಣದ ಸರಳು ತಂದಿಟ್ಟಿದ್ದೆ!!" ಅಂತಂದ. ತನ್ನ ಹುಡುಕಾಟವನ್ನು ಮುಂದುವರೆಸಿದ. ಆಗ ಬೆಟ್ಟದ ಮೇಲ್ಮೈಯನ್ನು ಸರಿ ಮಾಡುತ್ತಿದ್ದ ಇನ್ನೊಬ್ಬ ತನ್ನಷ್ಟಕ್ಕೇ ಕಿರು ನಗೆ ಬೀರಿದ. ಅದನ್ನು ಗಮನಿಸಿ "ನೀನ್ಯಾಕೆ ನಗುವುದು" ಅಂತ ವಿಚಾರಿಸಿದೆ. ಆಗ ಹೇಳಿದ "ಆ ಕಬ್ಬಿಣದ ಸರಳು ಇದರೊಳಗೆ ಉಂಟು" ಅಂತ ತಾನು ಸರಿಮಾಡುತ್ತಿದ್ದ ಬೆಟ್ಟದ ಕಡೆ ಬೊಟ್ಟುಮಾಡಿದ. ಬೆಟ್ಟದ ತುದಿಯಿಂದ ಸ್ವಲ್ಪ ಮರಳನ್ನು ಸರಿಸಿ ಸರಳಿನ ಒಂದು ತುದಿಯನ್ನು ತೋರಿಸಿದ. "ಅದ್ಯಾಕೆ ಅಲ್ಲಿ ಇಟ್ಟದ್ದು?" ಅಂತ ಕೇಳಿದೆ. "ಅದೂ...... ಆಗ ಈ ಮರಳು ಗಟ್ಟಿ ನಿಲ್ಲುತ್ತಿರಲಿಲ್ಲ, ಹಾಗಾಗಿ ಬೆಟ್ಟ ಮಾಡುವುದಕ್ಕೇ ಆಗುತ್ತಿರಲಿಲ್ಲ. ಅದಕ್ಕೆ ಮಧ್ಯದಲ್ಲಿ ಈ ಸರಳನ್ನಿಟ್ಟೆ. ಮತ್ತೆ ಸರಿಯಾಯಿತು" ಎಂದ. ದಂಗಾಯಿತು! ಇಷ್ಟು ಸಣ್ಣ ಹುಡುಗನಿಗೆ ಈ ಯೋಚನೆ ಎಲ್ಲಿಂದ ಹೊಳೆಯಿತು!!

"ನೀನೆಲ್ಯಾದರೂ ಮೊದಲು ಹೀಗೆ ಸರಳಿಡುವುದನ್ನು ನೋಡಿದ್ಯಾ?"  

"ಇಲ್ಲ...... ಅಲ್ಲಿ ಸುಮ್ಮನೆ ಇಟ್ಟುಕೊಂಡಿತ್ತಲ್ಲಾ....., ಹಾಗೆ ಅದನ್ನಿಡುವ, ಸರಿ ಆಗ್ಬೋದು ಅಂತ ಕಂಡಿತು"

"ಶಾಭಾಸ್" ಎಂದೆ.

ಪುಟ್ಟ ಪೋರ ಕಿರುನಗೆ ಬೀರಿ ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ.

ಇಂತಹ ಕಲಿಕೆಯನ್ನು ಮನೋವಿಜ್ಞಾನದಲ್ಲಿ ’ಇನ್‍ಸೈಟ್ ಲರ್ನಿಂಗ್’ (ಒಳದೃಷ್ಟಿ ಕಲಿಕೆ) ಅಂತ ಕರೆಯುತ್ತಾರೆ.  ಕೊಹ್ಲರ್ ಎಂಬ ವಿಜ್ಞಾನಿಯು ತನ್ನ ಮಂಗನ ಮೇಲೆ ಮಾಡಿದ ಪ್ರಯೋಗದಿಂದ ಕಂಡುಕೊಂಡಂತಹ ಕಲಿಕೆಯ ಪ್ರಕ್ರಿಯೆ ಇದು. ಎಷ್ಟೋ ಬಾರಿ ನಾವು ಸಮಸ್ಯೆಗಳನ್ನು ಪರಿಹರಿಸುವಾಗ ಫಕ್ಕನೆ ಎಲ್ಲಿಲ್ಲದ ಯೋಚನೆ ಬರುತ್ತದೆ. ಪರಿಹಾರ ಸುಲಭ ಸಾಧ್ಯವಾಗುತ್ತದೆ. ಬಹುಷಃ ಕಾಂಕ್ರೀಟಿನ ಮಧ್ಯದಲ್ಲಿ ಕಬ್ಬಿಣವಿಡುವ ಯೋಚನೆ ಹೀಗೆಯೇ ಯಾರಿಗೋ ಬಂದದ್ದಿರಬೇಕು!! ಆಮೇಲೆ ಉಳಿದವರು ಅದೇ ಕ್ರಮವನ್ನು ಅನುಸರಿಸಿರಬೇಕು. ಅಲ್ಲವೇ?!!

No comments:

Post a Comment