Tuesday, August 17, 2010

ಬಟ್ಲರ್ ಇಂಗ್ಲಿಷ್

ಈ ಲೇಖನವು ಸೆಪ್ಟೆಂಬರ್ 7, 2010 ರ ಕನ್ನಡ ಪ್ರಭದ 'ಕಾಲೇಜು ರಂಗ'ದಲ್ಲಿ ಪ್ರಕಟವಾಗಿದೆ.


                     "ಏನೋ ಚೇತನ್, ಹೇಗಿದ್ದೀಯ?!" ಬಹು ವರ್ಷಗಳ ನಂತರ ಸಿಕ್ಕಿದ್ದ ಗೆಳೆಯನನ್ನು ಕಂಡಾಗ ಸಂತೋಷವುಕ್ಕಿತು. "ಹಾಯ್, ಐ ಆಮ್ ಫೈನ್" ಎಂದ. ಹಿಂದೆಲ್ಲಾ "ಚೆನ್ನಾಗಿದ್ದೇನೆ" ಅನ್ನುತ್ತಿದ್ದ ಆತನ  ಉತ್ತರ ಕೇಳಿ ಏನಪ್ಪಾ ಇದು ವಿಚಿತ್ರ ಅಂತ ಅನ್ನಿಸಿತು. ಇಂಜಿನಿಯರಿಂಗ್ ಮುಗಿಸಿ ಬೆಂಗ್ಳೂರಲ್ಲಿ  ಕೆಲಸ ಸಿಕ್ಕಿ  ವರ್ಷ ಕಳೆಯುವಷ್ಟರಲ್ಲಿ ಕನ್ನಡವೇ ಮರೆತುಹೋಯ್ತೇ? ಅಲ್ಲ, ಬಿ.ಇ. ಕಲಿಯುತ್ತಿದ್ದಾಗಲೂ  ಕನ್ನಡದಲ್ಲಿ ಅಷ್ಟು ಚೆನ್ನಾಗಿ ಮಾತನಾಡುತ್ತಿದ್ದ ಈತನ ನಾಲಗೆ ಇಷ್ಟು ಬೇಗ ದಪ್ಪಗಾಯಿತೇ? ಕನ್ನಡೋಚ್ಚರಣೆ ಇವನ ನಾಲಗೆಯಲ್ಲಿ ಮಗುಚದಾಯಿತೇ ಅಂತ ಮನಸ್ಸಿನಲ್ಲೇ ಅಂದುಕೊಂಡೆ. ಹಾಗಂತ ಮುಖ ಭಾವದಲ್ಲಾಗಲೀ, ಮಾತಿನಲ್ಲಾಗಲೀ ಅದನ್ನು ತೋರ್ಪಡಿಸಲಿಲ್ಲ. ನಾನು ಕನ್ನಡದಲ್ಲೇ ಮಾತು ಮುಂದುವರೆಸಿದೆ. "ಏನಯ್ಯಾ! ಅವತ್ತು ಅಷ್ಟು ತೆಳ್ಳಗಿದ್ದೆ. ಈಗ ನೋಡಿದರೆ ಒಳ್ಳೆ ಆನೆ ಮರಿ ಥರಾ ಬೆಳೆದು ಬಿಟ್ಟಿದ್ದೀಯ!" ಅಂತ ಸ್ನೇಹಾಚಾರದಿಂದ ಅವನ ಹೆಗಲ ಮೇಲೆ ಕೈ ಹಾಕಿದೆ. "ದಾಟ್ ಈಸ್ ಬಿಕಾಸ್ ಆಫ್ ಹೆವಿ ವರ್ಕ್ ಎಂಡ್ ಮೋರ್ ಈಟಿಂಗ್. ಐ ಡೋಂಟ್ ಗೆಟ್ ಟೈಮ್ ಟು ಎಕ್ಸರ್ ಸೈಸ್". ಅವನ ಈ ಉತ್ತರ ಕೇಳಿ ಅವನ ಹೆಗಲ ಮೇಲಿದ್ದ ಕೈ ತನ್ನಿಂತಾನೇ ಕೆಳಗಿಳಿಯಿತು. ಆ ಆತ್ಮೀಯತೆಯ ಭಾವ ಕಳೆದು ಹೋಯಿತು. ಆದರೂ ಸುಧಾರಿಸಿಕೊಂಡು, ಏನು ಉತ್ತರ ಎಲ್ಲ ಇಂಗ್ಲಿಷ್ ನಲ್ಲೇ ಕೊಡ್ತಾ ಇದ್ದೀಯ?! ಕನ್ನಡ ಮರೆತು ಹೋಯ್ತಾ ಹೇಗೆ?" ಅಂತಂದದ್ದಕ್ಕೆ, "ನಥಿಂಗ್  ದಾಟ್ ಲೈಕ್. ಬಟ್ ನೌ ಐ ನಾಟ್ ಯೂಸ್ ಡ್ ಟು ಕನದ. ಸೋ ಐ ಪ್ರಿಫರ್ ಇಂಗ್ಲಿಷ್ ಓನ್ಲೀ" ಎಂದುತ್ತರಿಸಿದ. "ಎಲಾ ಇವನ! ಇಷ್ಟು ಬೇಗ ಕನ್ನಡ ಮರೆತು ಹೋಯಿತೇನೋ? ಹೋಗ್ಲಿ ಬಿಡು. ಇಂಗ್ಲಿಷ್ ಆದ್ರೂ ನನಗೆ ಪರವಾಗಿಲ್ಲ. ಆದ್ರೆ ಅದನ್ನಾದ್ರೂ ನಮಗೆ ಅರ್ಥವಾಗುವ ಹಾಗೆ ಮಾತನಾಡು. ನೀನು ಮಾತಾಡುವ ಇಂಗ್ಲಿಷ್ ಕೇಳಿದರೆ ಅದು ಅಲ್ಲಿಗೇ ಆದೀತು. ಸಾಮಾನ್ಯರಿಗೆ ಅರ್ಥವಾಗ್ಲಿಕ್ಕಿಲ್ಲ" ಅಂತಂದೆ. ನನ್ನ ಮಾತಿನ ಮರ್ಮವನ್ನು ಅರಿಯದ ಆತ, "ಓಹ್! ಈಸ್ ಇಟ್ ! ಗ್ರೇಟ್. ಐ ಟೂ ಗೆಸ್ಸ್ ಡ್ ದಾಟ್ ಯು ಮೇ ನಾಟ್ ಅಂಡರ್ ಸ್ಟಾಂಡ್ ಮೈ ಇಂಗ್ಲಿಷ್. ಬಿಕಾಸ್ ಇಟ್ ಈಸ್ ಕಾರ್ಪೋರೇಟ್ ಇಂಗ್ಲಿಷ್. ಯು ಪೀಪಲ್ ಸ್ಪೀಕ್ ಸಿಂಪಲ್ ಬಟ್ಲರ್ ಇಂಗ್ಲಿಷ್ ರೈಟ್" ಅಂತ ಅಹಂಕಾರದಿಂದ ಗೇಲಿ ಮಾಡಿದ. ಅಷ್ಟರಲ್ಲಿ ನನ್ನ ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ನನ್ನ ಇಂಗ್ಲೆಂಡ್ ನ ಗೆಳೆಯ ಜಾನ್ ಮಾತನಾಡುತ್ತಿದ್ದ. ಕೆಲವು ತಿಂಗಳ ಹಿಂದೆ ಸಾಂಸ್ಕೃತಿಕ ಅಧ್ಯಯನಕ್ಕೆ ಅಂತ ನಮ್ಮೂರಿಗೆ ಬಂದು, ನಮ್ಮ ಮನೆಯಲ್ಲೇ ಒಂದು ತಿಂಗಳು ಉಳಿದು ಹೋಗಿದ್ದ. ಯುರೋಪ್ ನಲ್ಲಿ ಪ್ಲಾಸ್ಟಿಕ್ ರಿಸೈಕ್ಲಿಂಗ್ ಮಾಡುತ್ತಾರೆ ಅಂತ ಕೇಳಿದ್ದ ನಾನು ಅದರ ಬಗ್ಗೆ ಆತನಲ್ಲಿ ಹೆಚ್ಚಿನ ಮಾಹಿತಿಯನ್ನು ಕೇಳಿದ್ದೆ. ಅದಕ್ಕುತ್ತರವಾಗಿ ಬೇರೆ ಬೇರೆ ಕಡೆಯಿಂದ ಮಾಹಿತಿ ಸಂಗ್ರಹಿಸಿ ನನಗೆ ಹೇಳಲು ಕರೆ ಮಾಡಿದ್ದ. ಅವನೊಂದಿಗೆ ಇಂಗ್ಲಿಷ್ ನಲ್ಲಿ ಎಗ್ಗಿಲ್ಲದೆ ಮಾತನಾಡಿದೆ. ನಮ್ಮ ಸಂಭಾಷಣೆಯನ್ನು ಸುಮ್ಮನೇ ಕೇಳುತ್ತಿದ್ದ ಗೆಳೆಯ ಚೇತನ್, ನನ್ನ ಮೊಬೈಲ್ ಮಾತು ಮುಗಿದಾಕ್ಷಣ ಹೇಳಿದ, "ಅಲ್ಲ ಮಾರಾಯ! ನನಗಿಂತ ಚೆನ್ನಾಗಿ ಇಂಗ್ಲಿಷ್ ನೀನೇ ಮಾತಾಡ್ತೀಯಲ್ಲ"?! "ಹೌದು, ಉಪಾಯವಿಲ್ಲ. ಜಾನ್ ಗೆ ಕನ್ನಡ ಬರುವುದಿಲ್ಲ. ಇಂಗ್ಲಿಷ್ ನಲ್ಲೇ ಮಾತಾಡಬೇಕಷ್ಟೇ" ಎಂದೆ.  "ಕ್ಷಮಿಸು ಮಾರಾಯ. ನಾನು ನಿನಗೇನೂ ಇಂಗ್ಲಿಷ್ ಬರಲಿಕ್ಕಿಲ್ಲ ಅಂತಂದುಕೊಂಡು ನನಗೆ ಬರುವ ಅಷ್ಟೋ, ಇಷ್ಟೋ ಇಂಗ್ಲಿಷ್ ನ್ನು ನಿನ್ನ ಮುಂದೆ ಮಾತಾಡಿದ್ದು. ನಿನಗೆ ಇಷ್ಟು ಇಂಗ್ಲಿಷ್ ಬರ್ತದೆ ಅಂತ ಮೊದಲೇ ಗೊತ್ತಿದ್ದಿದ್ರೆ ನಾನು ಆಗಲೆ ಕನ್ನಡ ಮಾತಾಡ್ತಿದ್ದೆ" ಅಂತ ತನ್ನ ಮೂರ್ಖತನವನ್ನು ಹಳಿದ. "ಓಹ್! ನೀನಿನ್ನೂ ಕನ್ನಡ ಮರೆತಿಲ್ಲ! ನಾನು ನಿನಗೆ ಕಾರ್ಪೋರೇಟ್ ಜಗತ್ತಿಗೆ ಹೋದ ಮೇಲೆ ಎಲ್ಲಾ ಮರೆತು ಹೋಗಿದೆ ಅಂತಂದುಕೊಂಡೆ" ಎಂದು ಮಾತಿನಲ್ಲೇ ತಿವಿದೆ. ನನ್ನ ಮಾತಿನ ತಿವಿತವನ್ನು ಅರ್ಥವಿಸಿಕೊಂಡು, " ಆ ವಿಷಯವನ್ನು ಬಿಟ್ಟು ಬಿಡು ಮಾರಾಯ. ಈಗ ನೀನು ಮೊಬೈಲ್ ನಲ್ಲಿ ಮಾತಾಡಿದ ವಿಷಯ ಎಂಥದ್ದು?" ಅಂತ ವಿಚಾರಿಸಿದ. ಆಗ ನನ್ನ ಪ್ಲಾಸ್ಟಿಕ್ ರಿಸೈಕ್ಲಿಂಗ್ ಯೂನಿಟ್ ನ್ನು ನಮ್ಮೂರಿನಲ್ಲಿ ಅಳವಡಿಸಿ, ತ್ಯಾಜ್ಯ ನಿರ್ವಹಣೆ ಮಾಡುವ ನನ್ನ ಆಲೋಚನೆಯ ಕುರಿತು ಅವನಿಗೆ ವಿವರಿಸಿದೆ. ಅಲ್ಲದೇ ಆ ತಂತ್ರಜ್ಞಾನ ಯೂರೋಪ್ ನಲ್ಲಿ ಹೇಗೆ ಬಳಸಲ್ಪಡುತ್ತಿದೆ ಎಂಬುದನ್ನೂ ವಿವರಿಸಿದೆ. "ನಿನ್ನ ಜೊತೆ ನಾನೂ ಸೇರಿಕೊಳ್ಳಬಹುದೇ" ಅಂತ ತನ್ನ ಉತ್ಸುಕತೆಯನ್ನು ತೋರಿದ. ನನಗೂ ಒಬ್ಬನ ಸಹಾಯ ಬೇಕಿತ್ತು. ಸಂತೋಷದಿಂದ ಒಪ್ಪಿಕೊಂಡೆ. "ಸರಿ ಹಾಗಿದ್ದರೆ, ಒಟ್ಟಿಗೇ ಸೇರಿ ಪ್ಲಾನ್ ಮಾಡೋಣ, ಬಾ" ಅಂತ ಬೈಕನ್ನೇರಿದೆವು. ಹೊರಡುವ ಮೊದಲು "ನಾವು ಬೇರೆ ಭಾಷೆ, ತಂತ್ರಜ್ಞಾನವನ್ನೆಲ್ಲಾ ಸ್ವೀಕರಿಸಿದರೂ, ನಮ್ಮತನ ಬಿಟ್ಟುಹೋಗದಂತೆ ಜಾಗ್ರತೆ ವಹಿಸಬೇಕು" ಅಂತಂದೆ. ಅದಕ್ಕೆ ಚೇತನ್ "ಒಪ್ಪಿದೆ ಕಣೋ" ಅಂತ ಹೇಳಿ ನಕ್ಕ. ನಾನೂ ನಕ್ಕು, ಬೈಕ್ ಹೊರಡಿಸಿದೆವು.

5 comments:

  1. ಸತ್ಯವಾದ ಮಾತು. ನಮ್ಮ ಭಾಷೆ,ಊರು,ಜನ,ಸಂಸ್ಕೃತಿಗಳ ಬಗ್ಗೆ ಅಸಡ್ಡೆ ತಪ್ಪು :) "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಶ್ರೀ ರಾಮ ಹೇಳಿದ ಮಾತು :)
    ಅದೇ ರೀತಿ..ಬೇರೆ ಭಾಷೆಗಳ ಬಗ್ಗೆ ಗೌರವವೂ ಇರಲೇ ಬೇಕು.

    ReplyDelete
  2. nice one.. The thing is when we speak english, we directly translate from our mother tongue.. Speaking English has its own culture.. Influence from mother tongue should be avoided..

    ReplyDelete
  3. adre nange illi kannadadalli hege bareyodu antha gottagtha illa... channagi bardidiya... ene adru kannadadalli matadidaaga sigo santosha.. bere yaav bhashelu sikkalla.. :)

    ReplyDelete