ಈ ಲೇಖನವು ಮೇ ೬ರ ಮಣಿಪಾಲ ಆವೃತ್ತಿಯ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.
ಇತ್ತೀಚೆಗೆ ದೇವ ಮಾನವರು ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿದ್ದಾರೆ. ತಾನು ಮಹಾಜ್ಞಾನಿ ಎಂದು ತಮ್ಮನ್ನು ತಾವೇ ಹೇಳಿಕೊಂಡು ಜನರನ್ನು ಮರುಳು ಮಾಡುವ ದಂಧೆ ಭಾರತದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ನಮ್ಮ ಸಂಸ್ಕೃತಿಯ ರಕ್ಷಕರೆಂದು ಕರೆಸಿಕೊಳ್ಳುವ ಇಂತಹವರುಗಳ ನಿಜಬಣ್ಣ ಆಗಾಗ ಬಯಲಾಗುತ್ತಲೇ ಇರುತ್ತದೆ. ಹಾಗಂತ ಇವರುಗಳನ್ನು ನೋಡಿ, ಸಂನ್ಯಾಸಿಗಳೆಲ್ಲರೂ ಹೀಗೆಯೇ ಇರುತ್ತಾರೆನ್ನಲಾಗದು; ಯೋಗದ ಹೆಸರು ಹೇಳುವವರೆಲ್ಲರ ತೆರೆಯ ಮರೆಯ ಜೀವನ ಬೇರೆಯದೇ ಇರುತ್ತದೆ ಎಂದು ಸಾರಾಸಗಟಾಗಿ ಹೇಳುವ ಮೂರ್ಖತನವನ್ನು ನಾನು ತೋರಲಾರೆ. ಆದರೆ ನಿಜವಾದ ಯೋಗಿಗಳ, ಸಂನ್ಯಾಸಿಗಳ ಮಧ್ಯೆ ಇಂತಹ ದರಿದ್ರಗಳು ಸೇರಿಕೊಂಡಾಗ, ಎಲ್ಲಾ ಬಣ್ಣ ಮಸಿ ನುಂಗಿದಂತಾಗುವುದು ಸುಳ್ಳಲ್ಲ.
ನಿಮಗೆ ಆ ತೊಂದರೆ ಇದೆ, ಈ ತೊಂದರೆ ಇದೆ, ನೀವು ನಡೆಯುವುದು ಸರಿ ಇಲ್ಲ, ನಿಮ್ಮ ಹೊಟ್ಟೆಯ ಬೆಳವಣಿಗೆ ಸರಿ ಆಗಿಲ್ಲ, ಹೀಗೆ ಜನರ ಬಾಹ್ಯ ಸೌಂದರ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಹೇಳುವ ಮೂಲಕ, ನಿಜವಾಗಿ ಇಲ್ಲದಿದ್ದರೂ, ಇದೆ ಎಂದು ಬಹಳ ಜ್ಞಾನಿಯಂತೆ ಖಚಿತವಾಗಿ ಹೇಳುವ ಮೂಲಕ, ಜನರಲ್ಲಿ ’ತಾನು ಸರಿ ಇಲ್ಲ’ ಎಂಬ ಭಾವ ಮೂಡುವಂತೆ ಮಾಡಿ, ಅದಕ್ಕೆ ತಾನು ಪರಿಹಾರ ನೀಡುತ್ತೇನೆ ಅಂತ ಒಂದಿಷ್ಟು ಶಿಷ್ಯರನ್ನು ಸಂಪಾದಿಸುವ ಹಲವಾರು ಖದೀಮರನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದು. ಇಂತಹವರ ಶಿಷ್ಯವರ್ಗದಲ್ಲಿ ಡಾಕ್ಟರುಗಳು, ಇಂಜಿನಿಯರುಗಳು, ಅಥವಾ ಉನ್ನತ ವಿದ್ಯಾಭ್ಯಾಸವನ್ನು ಹೊಂದಿದ ವ್ಯಕ್ತಿಗಳೂ ಸೇರಿರುತ್ತಾರೆ. ಎಷ್ಟೋ ಬಾರಿ, ಚೆನ್ನಾಗಿ ವೈದ್ಯಕೀಯ ವಿಜ್ಞಾನವನ್ನು ಅಭ್ಯಸಿಸಿ, ತನ್ನ ದೇಹದ ಪ್ರತಿಯೊಂದು ಭಾಗದ ಕುರಿತು ಆಳವಾಗಿ ತಿಳಿದಿರುವ ಉತ್ತಮ ವೈದ್ಯರೂ ಇಂತಹವರ ಮಾತುಗಳನ್ನು ಕೇಳಿ ಮೌಢ್ಯಕ್ಕೊಳಗಾಗುತ್ತಾರೆ. ಸರಿಯಾಗಿಯೇ ಇರುವ ತಮ್ಮ ದೇಹಾಂಗ ರಚನೆಯ ಬಗ್ಗೆ ಸಂಶಯಿಸುತ್ತಾರೆ. ಮಾತಿನ ಜಾಣ್ಮೆ ಇರುವ ಸೊ ಕಾಲ್ಡ್ ಯೋಗಿಗಳು ಅವರನ್ನು ಚಿಕಿತ್ಸೆಯ ಹೆಸರಲ್ಲಿ ಬೇಕಾದಂತೆ ಬಳಸಿಕೊಳ್ಳುತ್ತಾರೆ (ಹೇಗಾದರೂ ಇರಬಹುದು).
ಪ್ರಾಯಶಃ ಕಲಿಯುವುದರಲ್ಲಿ ಜಾಣರಾಗಿದ್ದೂ, ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆಗಾಗಿ ಪಠ್ಯದ ಓದನ್ನು ಬಿಟ್ಟು ಇನ್ನೇನನ್ನೂ ತಿಳಿದುಕೊಳ್ಳದೇ ಡಾಕ್ಟರ್ ಗಳೋ, ಇಂಜಿನಿಯರುಗಳೋ ಅಥವಾ ಇನ್ನೇನಾದರೂ ಆದ ವ್ಯಕ್ತಿಗಳು ಉದ್ಯೋಗಕ್ಕೆ ಸೇರಿದ ಬಳಿಕ ಕೆಲಸಗಳ ಒತ್ತಡದಿಂದ ಹೊರಬರಲಾಗದ ಸ್ಥಿತಿಯನ್ನು ತಲುಪಿದಾಗ, ಅವರಿಗೆ ಮೇಲೆ ಉಲ್ಲೇಖಿಸಿದಂತಹ ಮೋಸಗಾರರ ಮಾತುಗಳು ಹಿತವೆನಿಸುತ್ತವೆ. ಅವರು ಹೇಳಿ ಕೊಡುವ ಬಾಲಿಶ ಆಟಗಳು, ಏನೋ ಒಂದು ಸ್ವಲ್ಪ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳನ್ನು ಪರಿಹಾರವೆಂದು ತಿಳಿಯುತ್ತಾರೆ. ಇವರು ಹೇಳಿಕೊಡುವ ವಿಷಯಗಳೆಲ್ಲವೂ ಸರಿ ಇರುತ್ತದೆ ಅಂತೇನಿಲ್ಲ. ಮತ್ತು ಸರಿ ಇಲ್ಲದಾಗ ಅದರಿಂದ ತೊಂದರೆಯೂ ಇದೆ ಎಂಬುದೂ ತಿಳಿದಿರುವ ವಿಷಯವೇ. ಆದರೂ ಇವು ತಮ್ಮ ಸಮಸ್ಯೆಯಿಂದ ಸ್ವಲ್ಪ ಹೊರಬರಲು ಸಹಕಾರಿಯಾಗುತ್ತದೆಂದು ಅಚಲವಾಗಿ ನಂಬಿರುತ್ತಾರೆ. ಹೀಗೆ ತಮ್ಮ ಪರೀಕ್ಷಕ ದೃಷ್ಟಿಯನ್ನು ಕಳಕೊಂಡು ಆ ವ್ಯಕ್ತಿಯೇ ಲೋಕದಲ್ಲಿ ಸರ್ವ ಶ್ರೇಷ್ಠ ಯೋಗಿ ಎಂದು ನಂಬುತ್ತಾರೆ. ಇದು ಕಪಟಿಯಾದರೂ ಆಚಾರ್ಯ, ಗುರು, ಪಂಡಿತ ಅಂತ ಕರೆಸಿಕೊಳ್ಳುವುದಕ್ಕೆ ಆ ವ್ಯಕ್ತಿಗೆ ಸುಲಭವಾಗುತ್ತದೆ.
ಸಾಧಾರಣವಾಗಿ ಇಂತಹ ದುರ್ಜನರ ಗಾಳಕ್ಕೆ ಸುಲಭವಾಗಿ ಬೀಳುವವರು ಸ್ತ್ರೀಯರು. ಅದರಲ್ಲೂ ವಿವಾಹಿತ ಸ್ತ್ರೀಯರು ತಮ್ಮ ಹೊಸ ಪರಿಸ್ಥಿತಿಯಲ್ಲಿ ಭ್ರಮನಿರಸನಕ್ಕೊಳಗಾದಾಗ ಇಂತಹ ಕಪಟಿಗಳ ಸಂದರ್ಶನವಾದರೆ ಸುಲಭದಲ್ಲಿ ಬಲಿಬೀಳುತ್ತಾರೆ. ಆ ವ್ಯಕ್ತಿಯ ಪೂರ್ವಾಪರಗಳ ಕುರಿತು ವಿವೇಚಿಸದೇ ಆತನ ಶಿಷ್ಯೆಯರಾಗಿ ಬಿಡುತ್ತಾರೆ. ತಮ್ಮನ್ನು ತಾವು ಸರಿಮಾಡಿಕೊಳ್ಳುವ ಹಂಬಲದಿಂದ ಹೆಂಗಳೆಯರು ಗುರುಗಳ ಸೇವೆ ಮಾಡಲಾರಂಭಿಸುತ್ತಾರೆ, ಕಡೆಗೆ ಸೇವಿಸಲ್ಪಡುತ್ತಾರೆ. ಇದು ಈ ಗುರುಗಳೆಂದೆನಿಸಿಕೊಂಡವರಿಗೆ ಒಳ್ಳೆಯದೇ. ಅವರ ಪೂರ್ವಾಪರಗಳನ್ನು ಕುರಿತು ಪ್ರಶ್ನಿಸದಿರುವುದರಿಂದ ಕಪಟ ಯೋಗಿಗಳ "ನಿತ್ಯ ಸತ್ಯಗಳು" ಬಹಿರಂಗವಾಗುವುದೇ ಇಲ್ಲ. ಆದರೆ ಯಾವುದಾದರೂ ಟಿ.ವಿ. ಚಾನೆಲ್ಲೋ ಅಥವಾ ಪತ್ರಿಕೆಯವರೋ ಇಂತಹ ಗುರುವಿನ ನೈಜ ಜೀವನವನದ ಚಿತ್ರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಾಗ ಪಶ್ಚಾತ್ತಾಪ ಪಡುತ್ತಾರೆ. ಹಾಗಾಗಿ ಮತ್ತೆ ನೊಂದುಕೊಳ್ಳುವುದರ ಬದಲಾಗಿ ಮೊದಲೇ ವಿವೇಚನೆಯಿಂದ, ಯೋಗಿಗಳೆಂದು ಕರೆಸಿಕೊಳ್ಳುವವರ ಮಾತಿನ ಮೋಡಿಗೆ ಮಾರು ಹೋಗದೇ, ಅವರ ಬದುಕಿನ ಸತ್ಯವನ್ನು ಅರಿತೇ ಮುಂದುವರಿಯುವುದು ಒಳಿತಲ್ಲವೇ?
ಅಕ್ಷರ ದಾಮ್ಲೆ
ಬಹಳ ಚೆನ್ನಾಗಿದೆ, ವಿಷಯ ಹಾಗೂ ಬರವಣಿಗೆಯ ಶೈಲಿ. ಮುಂದುವರಿಯುತ್ತಿರಲಿ ನಿಮ್ಮ ಸಜೀವ ಲೇಖನಗಳು
ReplyDelete