"ನಂದಿನಿ ಹಾಲಿನ ಪ್ಯಾಕೆಟ್‌ನ ಮೇಲೆ ದನದ ಚಿತ್ರ ಯಾಕಮ್ಮಾ?" ಖಾಲಿಯಾದ ಹಾಲಿನ ಪ್ಯಾಕೆಟ್‌ನ್ನು ಎತ್ತಿಕೊಂಡ ಒಂದು ಪುಟ್ಟ ಮಗು ಕುತೂಹಲದಿಂದ ಅಮ್ಮನಲ್ಲಿ ಕೇಳಿದ ಪ್ರಶ್ನೆಯಿದು. ಕಾರಣ ಅದಕ್ಕೆ ಹಾಲಿಗೂ ದನಕ್ಕೂ ಇರುವ ಸಂಬಂಧ ಗೊತ್ತಿಲ್ಲ. ನಗರಗಳಲ್ಲಿ ನಿತ್ಯವೂ ಹಾಲನ್ನು ಪ್ಯಾಕೆಟ್‌ನಲ್ಲಿ ಖರೀದಿಸುವುದು ಅಭ್ಯಾಸ. ಬೆಲೆ ಹೆಚ್ಚಾದಾಗ ಒಮ್ಮೆ ಗೊಣಗಿಕೊಂಡರೂ ಬೇರೆ ವಿಧಿಯಿಲ್ಲ. ನಿರ್ಧರಿತ ಬೆಲೆಯನ್ನು ತೆತ್ತು ತರಬೇಕು. ಈ ಪ್ಯಾಕೆಟ್‌ನಲ್ಲಿ ಸಂಗ್ರಹವಾಗಿ ಬರುವ ಹಾಲಿನ ಹಿಂದೆ ಎಷ್ಟು ಕೆಲಸ ಇದೆ ಎಂಬುದನ್ನು ನಾವೆಂದಾದರೂ ಯೋಚನೆಗೆ ಹಚ್ಚಿದ್ದುಂಟೇ? ಹಾಲನ್ನು ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿ, ಸಂವರ್ಧಿಸಿ, ಶೀತಲೀಕರಿಸಿ ನಮಗೆ ’ನಂದಿನಿ’ ಎಂಬ ಹೆಸರಿನಿಂದ ಮಾರುಕಟ್ಟೆಯಲ್ಲಿ ಹಾಲನ್ನು ತಲುಪಿಸುತ್ತದೆ ಕರ್ನಾಟಕ ಹಾಲು ಒಕ್ಕೂಟ (ಕೆ.ಎಮ್.ಎಫ಼್). ಈ ಒಕ್ಕೂಟದಡಿಯಲ್ಲಿ ಹಲವಾರು ಸಂಘಗಳು ಹಾಲು ಸಂಗ್ರಹಣೆ ಮತ್ತು ಸಂರಕ್ಷಣೆಯ ಕಾರ್ಯದಲ್ಲಿ ಕೆಲಸ ಮಾಡುತ್ತವೆ. ಮೈಸೂರು ಜಿಲ್ಲೆಯಲ್ಲಿರುವ ಇಂತಹ ಹಲವಾರು ಸಂಘಗಳ ನಡುವೆ ಬಳ್ಳೂರು ಎಂಬ ಗ್ರಾಮದ ಸಂಘ ವಿಶೇಷವಾದದ್ದು. ಯಾಕೆಂದರೆ ಇಲ್ಲಿನ ಸಂಘವನ್ನು ನಡೆಸುವುದು ಮಹಿಳೆಯರು.
ಬಳ್ಳೂರು ಕೃಷ್ಣರಾಜ ನಗರ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಇಲ್ಲಿ ಕೃಷಿಯೇ ಪ್ರಧಾನ ಕಾಯಕ. ಕೃಷಿಗೆ ಪೂರಕವಾಗಿ ಹಸು ಹಾಗೂ ಎಮ್ಮೆಗಳನ್ನೂ ಸಾಕಿದ್ದಾರೆ. ಮನೆಯ ಬಳಕೆಗೆ ಬೇಕಷ್ಟನ್ನಿಟ್ಟುಕೊಂಡು ಹೆಚ್ಚಿನ ಹಾಲನ್ನು ೫ ಕಿಲೊಮೀಟರ್ ದೂರದಲ್ಲಿರುವ ಪಕ್ಕದ ಗ್ರಾಮವಾದ ಸಾಲಿಗ್ರಾಮದಲ್ಲಿದ್ದ ಡೈರಿಗೆ ಕೊಡುತ್ತಿದ್ದರು. ದಿನಕ್ಕೆರಡು ಬಾರಿ ಹಾಲನ್ನು ಕೊಟ್ಟುಬರುವುದೇ ಒಂದು ಹೊರೆಯಾಗಲಾರಂಭಿಸಿತು. ದೂರದೂರಿಗೆ ಹೋಗಿ ಹಾಲನ್ನು ಕೊಟ್ಟು ಬರುವ ಬದಲು ನಮ್ಮೂರಿನಲ್ಲೇ ಡೈರಿಯನ್ನು ಯಾಕೆ ಆರಂಭಿಸಬಾರದು ಎಂಬ ಚಿಂತನೆಯೊಂದಿಗೆ ಆರಂಭವಾದದ್ದೇ ಬಳ್ಳೂರಿನ ಡೈರಿ. ಈ ಚಿಂತನೆಯ ರೂವಾರಿ ರತ್ನ ಅಭ್ಯಂಕರ್ ಅವರು. ಜನರೇ ಅಪೇಕ್ಷಿಸಿದಂತೆ ಈಗಲೂ ಅವರೇ ಅದರ ಕಾರ್ಯದರ್ಶಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಆಡಳಿತ ಮಂಡಳಿಯನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹಾಗಾಗಿ ಇದು ಯಾವುದೇ ಒಬ್ಬ ವ್ಯಕ್ತಿಯ ಸೊತ್ತಲ್ಲ. ಇಡೀ ಊರೇ ಇದರಲ್ಲಿ ಪಾಲುದಾರರು. ಸದಸ್ಯರಾಗುವವರು ಷೇರುಗಳನ್ನು ಕೊಳ್ಳುವ ಮೂಲಕ ಬಂಡವಾಳದ ಸಂಗ್ರಹಣೆ. ಮೊದಮೊದಲು ಡೈರಿಯ ಸ್ಥಾಪನೆಯ ಕುರಿತು ಸಂಶಯ ಹೊಂದಿದ್ದರಿಂದ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳುವಲ್ಲಿ ಹಿಂಜರಿದರು. ಇದಕ್ಕೆ ಕಾರಣ ಈ ಹಿಂದೆ ಡೈರಿ ಆರಂಭಿಸುತ್ತೇವೆಂದು ಹೊರಟ ಕೆಲವರು ಹಣ ನುಂಗಿದ ಅನುಭವ ಇನ್ನೂ ಹಸಿಯಾಗಿತ್ತು. ಹೀಗಾಗಿ ಆರಂಭದ ಅಡಚಣೆಗಳನ್ನು ದಾಟುವುದಕ್ಕೆ ಸ್ವಲ್ಪ ಕಷ್ಟಪಡಬೇಕಾದರೂ ೨೦೦೪ರಲ್ಲಿ ಡೈರಿ ಆರಂಭವಾದ ಮೇಲೆ ಜನರ ವಿಶ್ವಾಸವನ್ನು ಗೆದ್ದಿತು. ಬಹಳ ಕಷ್ಟದಿಂದ ೧೫೨ ಮಂದಿಯನ್ನು ಷೇರುದಾರರಾಗಿ ಒಟ್ಟುಗೂಡಿಸಿದ್ದ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಷೇರುಗಳು ಬರತೊಡಗಿದುವು ಮತ್ತು ಷೇರುಗಳ ಸಂಖ್ಯೆ ಈಗ ೩೦೦ ತಲುಪಿದೆ. ದಿನಕ್ಕೆ ೬೦ ಲೀಟರುಗಳ ಸಂಗ್ರಹಣೆಯೊಂದಿಗೆ ಆರಂಭವಾದ ಡೈರಿ ಈಗ ೨೦೦೦ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಹಾಗಾಗಿ ಊರಿನಲ್ಲಿ ಉತ್ಪಾದನೆಯಾಗುವ ಹಾಲನ್ನು ಸಂಗ್ರಹಿಸಿ ಹುಣಸೂರಿಗೆ ಕಳಿಸುವ ಒಂದು ಹಾಲು ಸಂಗ್ರಹಣಾ ಕೇಂದ್ರವಾಗಿ ’ಡೈರಿ’ ಅಂತ ಆರಭವಾದದ್ದು ೨೦೧೩ರ ಹೊತ್ತಿಗೆ ಬಿಎಮ್‌ಸಿ (ಬಲ್ಕ್ ಮಿಲ್ಕ್ ಚಿಲ್ಲಿಂಗ್ ಸೆಂಟರ್ - ಸಗಟು ಹಾಲು ಶೀತಲೀಕರಣ ಘಟಕ) ಆಗಿ ಪರಿವರ್ತಿತವಾಗಿದೆ. ಬಳ್ಳೂರಷ್ಟೇ ಅಲ್ಲದೆ ಪಕ್ಕದ ೫ ಗ್ರಾಮಗಳಿಂದ ಹಾಲು ಇಲ್ಲಿ ಶೇಖರಣೆಯಾಗುತ್ತದೆ. ಅತೀ ಹೆಚ್ಚು ಹಾಲು ಉತ್ಪಾದಿಸುವ ಮಹಿಳಾ ಸಂಘ ಅನ್ನುವ ಗೌರವಕ್ಕೂ ಪಾತ್ರವಾಗಿದೆ. ವಾರಕ್ಕೆ ಸುಮಾರು ೧೪ ಲಕ್ಷ ಹಾಗೂ ವರ್ಷಕ್ಕೆ ಸುಮಾರು ಒಂದು ಕೋಟಿ ಇಪ್ಪತ್ತೈದು ಲಕ್ಷ ರೂಪಾಯಿಗಳಷ್ಟು ವ್ಯವಹಾರ ನಡೆಸುತ್ತದೆ.
ಡೈರಿ ಸ್ಥಾಪನೆಯಿಂದಾಗಿ ಬಳ್ಳೂರಿನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆ ಸಾಧ್ಯವಾಗಿದೆ. ಮನೆಗಳಲ್ಲಿ ಟಿ.ವಿ., ಫ್ರಿಡ್ಜ್, ಸ್ಕೂಟಿ, ಬೈಕು ಹೀಗೆ ಹಲವಾರು ಉಪಕರಣಗಳು ಬಂದಿವೆ. ಊರ ಮಹಿಳೆಯರು ಸಬಲರಾಗಿದ್ದಾರೆ. ತಮ್ಮ ಇತರ ಚಟುವಟಿಕೆಗಳಿಗೆ ಬ್ಯಾಂಕಿನಿಂದ ಅಥವಾ ಸಹಕಾರಿ ಸಂಘಗಳಿಂದ ಸಾಲವನ್ನು ಪಡೆಯುವ ಮತ್ತು ಅದನ್ನು ಮರುಸಂದಾಯ ಮಾಡುವ ಧೈರ್ಯ ಜನರಿಗೆ ಬಂದಿದೆ. ಕೂಲಿ ಕಾರ್ಮಿಕರಾಗಿ ಹೊಲಗಳಲ್ಲಿ ದುಡಿಯುವವರೂ ಕೂಡಾ ತಮ್ಮ ಮನೆಗಳಲ್ಲಿ ದನಗಳನ್ನು ಸಾಕುತ್ತಾರೆ. ಹೀಗಾಗಿ ಅವರುಗಳಿಗೆ ಜೀವನಕ್ಕೊಂದು ನಿರಂತರ ಆಧಾರವಾಗಿ ಡೈರಿ ಸಹಕರಿಸುತ್ತಿದೆ. ವಾರಕ್ಕಿಂತಿಷ್ಟು ಅಂತ ನಿರ್ಧರಿತವಾಗಿ ಗಳಿಸುವ ಆದಾಯವು ಜನರಿಗೆ ಜೀವನ ಭದ್ರತೆಯನ್ನು ನೀಡಿದೆ.
ಕೃಷಿ ಹಾಗೂ ಹೈನುಗಾರಿಕೆ ಒಂದಕ್ಕೊಂದು ಪೂರಕವಾಗಿ ಸಾಗುತ್ತಿವೆ. ಕೃಷಿಗೆ ಬೇಕಾಗುವ ಆಳುಗಳ ಸಹಕಾರ ಹೈನುಗಾರಿಕೆಗೆ ಬೇಕಾಗುವುದಿಲ್ಲ. ಮನೆ ಮಂದಿಯೇ ದನಗಳ ಕೆಲಸಗಳನ್ನು ನಿರ್ವಹಿಸಬಹುದು. ಹಾಗಾಗಿ ಎಷ್ಟೋ ಜನ ಪರಾವಲಂಬಿತವಾದ ಕೃಷಿಯನ್ನು ಬಿಟ್ಟು ಹೈನುಗಾರಿಕೆಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ.
ಡೈರಿಯಲ್ಲಿ ಬರುವ ಆದಾಯವನ್ನು ಒಕ್ಕೂಟದ ’ಬೈಲಾ ಪುಸ್ತಕ’ದಲ್ಲಿ ಹೇಳಲಾಗಿರುವ ಕಾನೂನು ಪ್ರಕಾರವೇ ವಿನಿಯೋಗಿಸುತ್ತಾರೆ. ಆದಾಯವನ್ನು ಜನರಿಗೆ ಬೋನಸ್ ರೂಪದಲ್ಲಿ ಕೊಡುವ ಕ್ರಮವೂ ಇದೆ.
ಬಳ್ಳೂರಿನ ಮಹಿಳಾ ಸಂಘವು ಹೀಗೆ ಕ್ಷೀರ ಕ್ರಾಂತಿಯ ಮೂಲಕ ಊರಿನ ಅಭಿವೃದ್ಧಿಗೆ ಕಾರಣವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಂದ ಇಂತಹ ಒಂದು ಪ್ರಯತ್ನ ಶ್ಲಾಘನೀಯ. ಮಹಿಳೆಯರ ಈ ಕಾರ್ಯದಲ್ಲಿ ಊರಿನ ಪುರುಷರೂ ಸಹಕರಿಸುತ್ತಿರುವುದು ಮತ್ತು ತಮ್ಮ ಕೈಲಾದ ಸಹಾಯ ಮಾಡುತ್ತಿರುವುದು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿದೆ. ಹೀಗೆಯೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಡಾಗ ದೇಶದ ಅಭಿವೃದ್ಧಿ ಸಾಧ್ಯ.