ಈ ಲೇಖನವು ಜೂನ್ ೮, ೨೦೧೦ ರಂದು, ಮಣಿಪಾಲ ಆವೃತ್ತಿಯ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.
"ಬಜ್ಪೆ ವಿಮಾನ ಅಪಘಾತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿಯನ್ನು ಕೋರೋಣ", ಆಗಷ್ಟೇ ಸೆಮೆಸ್ಟರ್ ನ ಕನ್ನಡ ಪರೀಕ್ಷೆಯನ್ನು ಮುಗಿಸಿ ಬಂದು ಗೋಡೆಗೆ ಒರಗಿಕೊಂಡಿದ್ದ ನನಗೆ ಮೊಬೈಲ್ ಗೆ ಬಂದ ಮೆಸೇಜ್ ನೋಡಿ ದಿಗಿಲಾಯಿತು. ನೆಟ್ಟಗಾದೆ. ಯಾವಾಗ? ಹೇಗೆ? ಎಷ್ಟು ಹೊತ್ತಿಗೆ? ಹೀಗೆ ಹಲವಾರು ಪ್ರಶ್ನೆಗಳು ಕಾಡತೊಡಗಿದುವು. ಮೆಸೇಜ್ ಕಳಿಸಿದವರಲ್ಲಿ ವಿವರ ಕೇಳಿದೆ. ಮತ್ತೆ ತಿಳಿಯಿತು, ಬೆಳಗ್ಗೆ ೬ ಗಂಟೆಯ ಸುಮಾರಿಗೆ ನಮ್ಮ ಮನೆಯ ಮೇಲಿಂದಲೇ ಸಾಗಿದ್ದ ಆ ವಿಮಾನ ಹೋಗಿ ಇಳಿದದ್ದು ಮೃತ್ಯು ಕಣಿವೆಗೆ ಎಂದು. ಅಲ್ಲಿ ನಡೆದ ವಿದ್ಯಮಾನಗಳನ್ನು ಪತ್ರಿಕೆಗಳು, ಟಿ. ವಿ. ಮಾಧ್ಯಮಗಳು ಸವಿವರವಾಗಿ ನೀಡಿವೆ. ಮರುದಿನ ಪತ್ರಿಕೆಗಳನ್ನು ಓದಿದ ಮೇಲೆ ನನಗನಿಸಿದ್ದೇನೆಂದರೆ, ಈಗ ವಿಮಾನ ಬಿದ್ದ ಮೇಲೆ ಬಜ್ಪೆ ವಿಮಾನ ನಿಲ್ದಾಣದ ರನ್ ವೇ ಯ ಉದ್ದ ಕಡಮೆ ಆಗಿದೆ. ಅಥವಾ ರನ್ ವೇ ಯ ಉದ್ದ ಕಡಮೆ ಇದೆ ಎಂದು ಅರೋಪಿಸುವವರ ಸಂಖ್ಯೆ ಉದ್ದವಾಗಿದೆ. ಏರ್ ಇಂಡಿಯಾದ ಬಗ್ಗೆ ಮೊದಲಿನಿಂದಲೂ ದೂರುಗಳಿದ್ದುವು. ಆದರೆ ಈಗ ದೂರುವವರ ಕೂಗು ಜೋರಾಗಿದೆ. ವಿಮಾನದ ಅಪಘಾತಕ್ಕೆ ನಿಜವಾದ ಕಾರಣಗಳೇನು ಎಂಬುದು ಬ್ಲಾಕ್ ಬಾಕ್ಸ್ ನಿಂದ ಹೊರಗೆಳೆಯಬೇಕಷ್ಟೇ. ಆದರೆ ಒಂದು ಲಾಭವೆಂದರೆ ಬಜ್ಪೆ ವಿಮಾನ ನಿಲ್ದಾಣದ ರನ್ ವೇ ಇನ್ನೂ ಸ್ವಲ್ಪ ಉದ್ದವಾಗುವ ಸಂಭವವಿದೆ (ಎಷ್ಟು ವರ್ಷಗಳ ನಂತರ ಎಂದು ಗೊತ್ತಿಲ್ಲ!). ಒಳ್ಳೆಯದೇ. ಇನ್ನೊಮ್ಮೆ ಇಂತಹ ಅವಘಡ ಮರುಕಳಿಸದಿರಲಿ ಎಂಬುದೇ ಎಲ್ಲರ ಹಾರೈಕೆ.
ವಿಮಾನದ ಅಪಘಾತಕ್ಕೆ ಕಾರಣಗಳೇನು ಎಂಬುದು ಸ್ಪಷ್ಟವಾಗಿ ಇನ್ನೂ ತಿಳಿದಿಲ್ಲದಿದ್ದರೂ ಒಬ್ಬೊಬ್ಬರು ಒಂದೊಂದು ಊಹೆಯನ್ನು ಮಾಡುತ್ತಾರೆ. ಕೆಲವರು ಪೈಲೆಟ್ ಗಳಿಂದಾದ ಪ್ರಮಾದ ಎಂದರೆ ಇನ್ನು ಕೆಲವರು ಏರ್ ಇಂಡಿಯಾವನ್ನು, ಕಂಟ್ರ್ಓಲ್ ರೂಂನವರನ್ನು, ರನ್ ವೇಯನ್ನು ಹೀಗೆ ತಮ್ಮ ದೃಷ್ಟಿಯ ನೇರಕ್ಕೆ ಮಾತನಾಡುತ್ತಿದ್ದಾರೆ. ಇಂತಹ ಕಾರಣಗಳಲ್ಲಿ ಪ್ರಯಾಣಿಕರ ಬಗ್ಗೆ ಯಾರೂ ಸಂಶಯಿಸಲೇ ಇಲ್ಲ. ಕುವೈಟ್ ನ ಥೋಮಸ್ ಡೊಮಿನಿಕ್ ಎಂಬವರು ಈ ಬಗ್ಗೆಯೂ ನಮ್ಮ ದೃಷ್ಟಿಯನ್ನು ಹರಿಯಗೊಟ್ಟಿದ್ದಾರೆ. ಸಾಧಾರಣವಾಗಿ ವಿಮಾನ ಭೂಮಿಗಿಳಿಯುವ ಸಂದರ್ಭದಲ್ಲಿ ಮತ್ತು ಭೂಮಿಯಿಂದ ಮೇಲೇರುವ ಸಂದರ್ಭದಲ್ಲಿ ಮೊಬೈಲ್ ಗಳನ್ನು ಆಫ್ ಮಾಡುವುದಕ್ಕೆ ಹೇಳುತ್ತಾರೆ. ಕಾರಣವೇನೆಂದರೆ, ಮೊಬೈಲ್ ತರಂಗಗಳು ವಿಮಾನದ ಕಂಟ್ರೋಲ್ ರೂಮ್ ನೊಂದಿಗೆ ಸಂವಹಿಸುವ ತರಂಗಗಳಿಗೆ ತೊಂದರೆ ನೀಡುತ್ತವೆ. ಅಲ್ಲದೇ ಇವುಗಳಿಂದಾಗಿ ಪೈಲೆಟ್ ಗಳಿಗೆ ವಿಮಾನ ಎಷ್ಟು ಎತ್ತರದಲ್ಲಿದೆ, ಗಾಳಿಯ ಒತ್ತಡ ಎಷ್ಟಿದೆ ಎಂಬಂತಹ ಹಲವಾರು ಮಾಹಿತಿಗಳನ್ನೊದಗಿಸುವ ಯಂತ್ರಗಳು ತಪ್ಪು ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ. ಹಾಗಾದಾಗ, ಅಲ್ಲಿ ಬಂದ ತಪ್ಪು ವಿವರಗಳೇ ಸರಿ ಎಂದು ಊಹಿಸಿದ ಪೈಲೆಟ್ ನ ಲೆಕ್ಕಾಚಾರ ತಲೆಕೆಳಗಾಗುತ್ತದೆ. ವಿಮಾನ ಉರುಳುತ್ತದೆ. ತಮ್ಮ ತಪ್ಪು ಇಲ್ಲದೆಯೂ ಅಜಾಗ್ರತೆ, ನಿದ್ದೆಗಣ್ಣು ಹೀಗೆ ಹಲವಾರು ಆರೋಪಗಳನ್ನು ಪೈಲೆಟ್ ಗಳು ಕೇಳಿಸಿಕೊಳ್ಳಬೇಕಾಗುತ್ತದೆ. ಮೊನ್ನೆ ನಡೆದ ದುರಂತದಲ್ಲಿ ವಿಮಾನದ ನಿಯಂತ್ರಣ ತಪ್ಪಿದ ಮೇಲೂ ಪೈಲೆಟ್ ಗಳು ಹಾರಿ ತಮ್ಮ ಜೀವವನ್ನು ಉಳಿಸಿಕೊಳ್ಳುವ ಮನಸ್ಸನ್ನು ತೋರಿಸಲಿಲ್ಲ. ಬದಲಾಗಿ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡುವುದಕ್ಕೆ ಪ್ರಯತ್ನಿಸುವ ಮೂಲಕ ಎಲ್ಲರನ್ನೂ ಉಳಿಸುವುದಕ್ಕೆ ಹವಣಿಸಿದರು. ಅದು ಕೈಗೂಡಲಿಲ್ಲ. ಹಾಗಾಗಿ ವಿಧಿಯ ಆಟ ಬೇರೆಯೇ ಇತ್ತು ಎಂದು ಹೇಳಬೇಕಷ್ಟೆ.
ರನ್ ವೇಯನ್ನು ಉದ್ದ ಮಾಡುವುದಕ್ಕೆ ರಾಜಕಾರಣಿಗಳು, ಇತರ ಮುಖಂಡರು, ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ಲ ಪಟೇಲ್ ರವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಇದು ವಾಯುಯಾನದ ವಿಷಯಕ್ಕಾಯಿತು. ರಸ್ತೆ ಸಂಚಾರದ ಕಥೆ ಏನು? ರಸ್ತೆ ಅಗಲೀಕರಣ, ಉನ್ನತೀಕರಣದ ಕುರಿತು ಯಾಕಿಷ್ಟು ಔದಾಸೀನ್ಯ ವಹಿಸುತ್ತಾರೋ ತಿಳಿಯೆ. ರಸ್ತೆಗಳು ಸರಿ ಇಲ್ಲದ ಕಾರಣದಿಂದಲೇ ದಿನನಿತ್ಯ ಇಷ್ಟೊಂದು ಅಪಘಾತಗಳು ಸಂಭವಿಸುತ್ತಿವೆ. ಎಷ್ಟೊಂದು ಜನರು ಜೀವ ಕಳೆದುಕೊಂಡಿದ್ದಾರೆ! ಆದರೂ ಇದು ಮಂತ್ರಿಗಳ, ಜನಪ್ರತಿನಿಧಿಗಳ ಗಮನಕ್ಕೆ ಅಥವಾ ಎಷ್ಟೋ ಬಾರಿ ಜನಸಾಮಾನ್ಯರ ಗಮನಕ್ಕೂ ಬಾರದಿರುವುದಕ್ಕೆ ಕಾರಣವಿಷ್ಟೇ. ನಮಗೆ ರಸ್ತೆ ಅಪಘಾತಗಳು ಮಾಮೂಲಾಗಿಬಿಟ್ಟಿವೆ. ದಿನ ನಿತ್ಯವೂ ಒಂದು ಬಸ್ಸೋ ಅಥವಾ ಲಾರಿಯೋ ಅಥವಾ ಇನ್ಯಾವುದಾದರೂ ವಾಹನವೋ ಗುದ್ದಿದ, ನಜ್ಜುಗುಜ್ಜಾದ ಚಿತ್ರವು ದಿನಪತ್ರಿಕೆಗಳಲ್ಲಿ ಸರ್ವೇಸಮಾನ್ಯ. ಇಂತಹ ಚಿತ್ರಣಗಳನ್ನು ನೋಡಿದಾಗ ಜನರ ಮನಸ್ಸಿನಲ್ಲಿ ಹೆದರಿಕೆ ಬಿಡಿ, ಎಷ್ಟೋ ಬಾರಿ ಜೀವ ಕಳೆದುಕೊಂಡವರ ಬಗ್ಗೆ ಕಡೇ ಪಕ್ಷ ಕರುಣೆಯ ಮಾತುಗಳೂ ಕೇಳಿ ಬರುವುದಿಲ್ಲ. ಆದರೂ ನಮಗರಿವಿಲ್ಲದೆಯೇ ಎಷ್ಟೋ ಕುಟುಂಬದ ಕುಡಿಗಳು, ಬದುಕಿನ ಆಧಾರ ಸ್ತಂಭಗಳು ಕಳೆದು ಹೋಗುತ್ತಿವೆ.
ಪ್ರಪಂಚದಲ್ಲಿಯೇ ರಸ್ತೆ ಅಪಘಾತಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ. ಭಾರತದಲ್ಲಿ ಆಗುವ ರಸ್ತೆ ಅಪಘಾತಗಳ ಸಂಖ್ಯೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆಗುವ ರಸ್ತೆ ಅಪಘಾತಗಳ ಮೂರು ಪಟ್ಟು. ಭಾರತದ ಪ್ರತಿ ೧೦೦೦ ವಾಹನಗಳಲ್ಲಿ ೩೫ ವಾಹನಗಳು ಅಪಘಾತಗೊಂಡರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೇವಲ ೪ರಿಂದ ೧೦. ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯ ವರದಿಯ ಪ್ರಕಾರ ವರ್ಷಕ್ಕೆ ೧.೦೫ ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಮಡಿಯುತ್ತಿದ್ದಾರೆ. ಅಂತೆಯೇ ವಿಮಾನ ನಿಲ್ದಾಣಗಳಲ್ಲಿ ಆಗುವ ವಿಮಾನಗಳ ಅಪಘಾತಗಳ ಸಂಖ್ಯೆ ಮತ್ತು ಅದರಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ಬಹಳ ಕಡಮೆ. ೧೯೮೨ ರಲ್ಲಿ ಮುಂಬೈಯಲ್ಲಿ ೧೭ ಜನ, ೧೯೮೮ರಲ್ಲಿ ಅಹಮದಾಬಾದ್ ನಲ್ಲಿ ೧೨೪ ಮಂದಿ, ೯೦ ರಲ್ಲಿ ೯೨ ಜನ, ೯೧ರಲ್ಲಿ ಇಂಫಾಲ್ ನಲ್ಲಿ ೬೯ ಪ್ರಯಾಣಿಕರು, ೯೩ರಲ್ಲಿ ೫೫ ಮಂದಿ ಔರಂಗಾಬಾದ್ ನಲ್ಲಿ, ೨೦೦೦ದಲ್ಲಿ ೬೦ ಜನ ಪಾಟ್ನಾದಲ್ಲಿ ಮತ್ತು ಇತ್ತೀಚೆಗೆ ೨೦೧೦ರಲ್ಲಿ ೧೫೮ ಮಂದಿ ಮಡಿದಿದ್ದಾರೆ. ಈ ವಿವರಗಳನ್ನು ನೋಡುವಾಗ, ರಸ್ತೆ ಅಪಘಾತಗಳ ಬಗ್ಗೆ ನಾವು ಎಚ್ಚರಿಕೆ ವಹಿಸಬೇಡವೇ? ಇಂತಹ ಪರಿಸ್ಥಿತಿಯನ್ನು ಆದಷ್ಟು ಬೇಗ ಸರಿಮಾಡಲು ಜನಸೇವಕರು ಮತ್ತು ರಸ್ತೆ ನಿರ್ಮಾಣ ಸಂಬಂಧಿ ಎಂಜಿನಿಯರುಗಳು ಮನಸ್ಸು ಮಾಡುತ್ತಾರೆಯೇ? ರಸ್ತೆಗಳು ಚೆನ್ನಾಗಿ ಇರುವಂತೆ ಎಚ್ಚರ ವಹಿಸುತ್ತಾರೆಯೇ? ರಸ್ತೆ ಅಪಘಾತಗಳನ್ನು ಕಡಮೆ ಮಾಡಲು ಸೂಕ್ತ ಸೂಚನಾ ಫಲಕಗಳನ್ನು ನೆಡುತ್ತಾರೆಯೇ? ಡಾಮರು ರಸ್ತೆಗಳ ಬದಿಗಳನ್ನು ಮಣ್ಣು ತುಂಬಿಸಿ ಬದಿಗಳನ್ನು ಸರಿ ಮಾಡುವ ಬಗ್ಗೆ ಗಮನ ವಹಿಸುತ್ತಾರೆಯೇ? ಅಗತ್ಯವಿದ್ದಲ್ಲಿ ರೋಡ್ ಹಂಪ್ ಗಳನ್ನು ಮಾಡುವ ಕುರಿತು ಆಸಕ್ತರಾಗಿದ್ದಾರೆಯೇ?
ನಮ್ಮ ರಸ್ತೆಗಳ ಕುರಿತು ಒಬ್ಬ ೬ ವರ್ಷದ ಮುಗ್ಧ ಪೋರ ಮೊನ್ನೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೀಡಿದ ಹೇಳಿಕೆ ಮಾರ್ಮಿಕವಾಗಿತ್ತು. ಮಂಗಳೂರು ನಗರದಿಂದ ಬಿ.ಸಿ. ರೋಡ್ ಕಡೆಗೆ ಬಸ್ ಹೊರಟಾಗ ಆರಂಭದಲ್ಲಿ ರಸ್ತೆ ಚೆನ್ನಾಗಿಯೇ ಇತ್ತು. ಕಿಟಕಿಯ ಮೂಲಕ ಬೀಸುತ್ತಿದ್ದ ಗಾಳಿಯನ್ನು ಆಸ್ವಾದಿಸುತ್ತಿದ್ದ ಪುಟ್ಟ "ಅಚ್ಛಾ ಲಗ್ ರಹಾ ಹೇ ನ ಪಪ್ಪಾ?" (ಒಳ್ಳೆದಾಗ್ತಾ ಇದೆ ಅಲ್ವ ಅಪ್ಪಾ?) ಅಂತ ತನ್ನ ತಂದೆಯಲ್ಲಿ ಸಂತೋಷವನ್ನು ಹಂಚಿಕೊಂಡ. ಅಪ್ಪ ನಗುನಗುತ್ತಾ ತಲೆ ಅಲ್ಲಾಡಿಸಿದ. ಮುಂದೆ ಸಾಗುತ್ತಿದ್ದಂತೆ, ರಸ್ತೆಯ ಪರಿಸ್ಥಿತಿ ಸ್ವಲ್ಪ ಹದಗೆಟ್ಟಿತು. ಆಗ "ರಾಸ್ತಾ ಖರಾಬ್ ಹೇ ನ ಪಪ್ಪಾ?" (ರಸ್ತೆ ಕೆಟ್ಟದಾಗಿದೆಯಲ್ಲ ಅಪ್ಪಾ?) ಅಂತ ಸ್ವಲ್ಪ ಅಸಹನೆಯನ್ನು ತೋರ್ಪಡಿಸಿದ. ಅಪ್ಪ ಹೌದು ಎಂಬಂತೆ ತಲೆ ಅಲ್ಲಾಡಿಸಿದ. ಮುಂದೆ ಹೋಗುವಾಗ ರಸ್ತೆ ಪರಿಸ್ಥಿತಿ ತುಂಬಾ ಕೆಟ್ಟದಾಗಿ ಹೋಗಿತ್ತು. ಬಸ್ಸು ಮೇಲೆ ಕೆಳಗೆ ಹಾರಲಾರಂಭಿಸಿತ್ತು. ಹೊಂಡಗಳನ್ನು ಇಳಿದು ಏರತೊಡಗಿತು. ಕಂಗಾಲಾದ ಹುಡುಗ "ಅಬ್ ರಾಸ್ತೇ ಪರ್ ಜಾತಾ ಹೇ ಕ್ಯಾ?!" (ಈಗ ರಸ್ತೆಯ ಮೇಲೆ ಹೋಗುತ್ತಿದೆಯಾ?!) ಅಂತ ತಂದೆಯನ್ನು ಪ್ರಶ್ನಿಸಿದ. ತಂದೆ ಪೆಚ್ಚುಬಿದ್ದ!