ಇತ್ತೀಚಿನ ದಿನಗಳಲ್ಲಿ ಹರೆಯದ ಯುವಕ ಯುವತಿಯರು ಹಾದಿ ತಪ್ಪುತ್ತಿರುವುದಕ್ಕೆ ಈಗಿನ ಮೊಬೈಲ್, ಇಂಟರ್ ನೆಟ್ ಮುಂತಾದ ವ್ಯವಸ್ಥೆಗಳೇ ಕಾರಣ ಎಂದು ಹಲವರು ದೂಷಿಸುವುದನ್ನು ಆಗಾಗ ಪತ್ರಿಕೆಗಳಲ್ಲಿ ಓದುತ್ತೇವೆ, ರೇಡಿಯೋಗಳಲ್ಲಿ ಮತ್ತು ಸಾಮಾನ್ಯವಾಗಿ ಸಭೆ ಸಮಾರಂಭಗಳಲ್ಲಿ ಕೇಳುತ್ತೇವೆ. ನನಗೆ ಅರ್ಥವಾಗದಿರುವುದು, ತಪ್ಪು ಯಾರದ್ದೆಂಬುದು. ತಂತ್ರಜ್ಞಾನದಿಂದ ಹಾದಿ ತಪ್ಪುತ್ತಾರಾದರೆ ತಂತ್ರಜ್ಞಾನವನ್ನೇ ಧಿಕ್ಕರಿಸೋಣವೇ? ಧಿಕ್ಕರಿಸಬೇಕಾದರೆ ಅದರಲ್ಲಿ ಪೂರ್ತಿ ಹಾಳಿರಬೇಕು. ಆದರೆ ಇಂದಿನ ದಿನಗಳಲ್ಲಿ ಮೊಬೈಲ್, ಇಂಟರ್ ನೆಟ್ ಗಳಿಂದಾಗಿ ಸುಲಭ ಸಂಪರ್ಕ ಸಾಧ್ಯವಾಗಿದೆ. ಬಹು ದೊಡ್ದ ಜ್ಞಾನ ಸಂಪತ್ತು ಶೇಖರವಾಗಿದೆ. ಇವುಗಳೆಲ್ಲದರ ಜೊತೆಗೆ ಕೆಟ್ಟ ವಿಷಯಗಳೂ ಇವೆ. ಹೀಗಿರುವಾಗ ತಂತ್ರಜ್ಞಾನದ ಸದುಪಯೋಗದ ಕುರಿತು ಎಳವೆಯಲ್ಲಿಯೇ ಅರಿವನ್ನು ಮೂಡಿಸಿದರೆ, ಆಗ ಹಾದಿ ತಪ್ಪುವುದನ್ನು ತಪ್ಪಿಸಲು ಸಾಧ್ಯ.
ವಿಜ್ಞಾನದ ಯಾವುದೇ ಒಂದು ಸಂಶೋಧನೆಗೆ ಅದರದ್ದೇ ಆದ ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳಿದ್ದೇ ಇರುತ್ತದೆ. ಐನ್ ಸ್ಟೀನ್ ನ ಸಾಪೇಕ್ಷತಾ ವಾದ ಕೂಡಾ ಇದಕ್ಕೆ ಹೊರತಲ್ಲ. ಯಾಕೆಂದರೆ ಸಾಪೇಕ್ಷತಾ ಸಿದ್ಧಾಂತವನ್ನು ಬಳಸಿಕೊಂಡೇ ಅಲ್ಲವೇ ಹಿರೋಶಿಮಾ, ನಾಗಸಾಕಿಯನ್ನು ಧ್ವಂಸಗೊಳಿಸಿದ್ದು?! ಅಥವಾ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಜೈವಿಕ ತಂತ್ರಜ್ಞಾನದ ಸಂಶೋಧನೆಗಳೂ ಅಷ್ಟೆ. ಉತ್ತಮ ರೀತಿಯಲ್ಲಿ ಬಳಸಿದರೆ ಅದು ಮಾನವ ಕುಲದ ಒಳಿತಿಗಾಗಿ ಬಳಕೆಯಾಗುತ್ತದೆ. ಇಲ್ಲವಾದರೆ, ನಿರ್ನಾಮಕ್ಕೆ ನಾಂದಿ ಹಾಡುತ್ತದೆ. ಅಂತೆಯೇ ಈ ಮೊಬೈಲ್ ಮತ್ತು ಅಂತರ್ಜಾಲಗಳೆಂಬ ತಂತ್ರಜ್ಞಾನಗಳು.
ಇತ್ತೀಚಿನ ಒಂದು ದಿನ ಪತ್ರಿಕೆಯಲ್ಲಿ ಬಂದ ಲೇಖನದಲ್ಲಿ, ಯುವ ಜನರ ಮೊಬೈಲ್ ಚಾಟಿಂಗ್ ನ್ನು ತಡೆಯಲು ಎಸ್.ಎಂ.ಎಸ್.ಗಳ ದರಗಳನ್ನು ಹೆಚ್ಚಿಸಬೇಕು ಎಂಬ ಉಚಿತ ಸಲಹೆಯನ್ನು ನೀಡಿದ್ದರು. ಆದರೆ ನನ್ನ ದೃಷ್ಟಿಯಲ್ಲಿ ಇದೊಂದು ಹಾಸ್ಯಾಸ್ಪದ ವಿಷಯ. ಯಾಕೆಂದರೆ, ಎಸ್.ಎಂ.ಎಸ್.ಗಳ ಮಹತ್ವ ಅಂತಹುದು. ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಗಳು ಬಳಸುವ ವಿದ್ಯುದಯಸ್ಕಾಂತೀಯ ತರಂಗಗಳಿಂದ ನಮ್ಮ ದೇಹಕ್ಕಾಗುವ ಅನೇಕ ತೊಂದರೆಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಿಂದ ತಿಳಿದು ಬಂದಿರುವುದೇನೆಂದರೆ, ಕರೆ ಮಾಡಿದಾಗ ದೇಹಕ್ಕಾಗುವ ತೊಂದರೆಗಿಂತ, ಸಂದೇಶಗಳನ್ನು ಕಳಿಸಿದಾಗುವ ಹಾನಿ ಕಡಮೆ ಎಂದು. ಹಾಗಾಗಿ ಮೊಬೈಲುಗಳ ಹಾನಿಗಳ ಕುರಿತು ಮತ್ತು ಅವುಗಳಿಂದ ಆದಷ್ಟೂ ದೂರ ಇರುವುದರ ಕುರಿತು ಹಿರಿಯ ವೈzÀåರುಗಳು ಬರೆದಿರುವ ಲೇಖನಗಳಲ್ಲಿ “ಅಗತ್ಯವಿದ್ದಲ್ಲಿ ಮಾತ್ರ ಕರೆ ಮಾಡಿ. ಮೆಸೇಜ್ ನಲ್ಲೇ ಮುಗಿಸುವಂತಿದ್ದರೆ, ಮೆಸೇಜ್ ಗಳನ್ನೇ ಬಳಸಿ” ಎಂದು ನಾವು ಕಾಣಬಹುದು. ಅಲ್ಲದೇ ಎಷ್ಟೋ ವಿಷಯಗಳನ್ನು ಉದಾಹರಣೆಗೆ ಯಾವುದೋ ಕಾರ್ಯಕ್ರಮದ ಆಮಂತ್ರಣವನ್ನೋ ಅಥವಾ ಯಾರದೋ ವಿಳಾಸವನ್ನೋ ಎಸ್.ಎಂ.ಎಸ್. ಮೂಲಕ ಕಳುಹಿಸುವುದು ಸುಲಭ. ಉಚಿತ ಮೆಸೇಜುಗಳನ್ನು ಒಪರೇಟರ್ ಗಳು ಕೊಡುವುದಕ್ಕೆ ಕಾರಣ, ಮೆಸೇಜುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವುದು ಅವರಿಗೂ ಬಹಳ ಸುಲಭ ಮತ್ತು ಬಹಳ ಕಡಮೆ ಖರ್ಚಿನದ್ದು. ಉಚಿತ ಮೆಸೇಜುಗಳನ್ನು ಕೊಡುವುದರಿಂದ ಅವರೇನು ಅಂಥ ನಷ್ಟವನ್ನನುಭವಿಸುವುದಿಲ್ಲ. ಇಂಟರ್ ನೆಟ್ ಕೂಡಾ ಈಗ ಅಗ್ಗವಾಗುತ್ತಿದೆ.
ಮಕ್ಕಳು ಮೊಬೈಲಿನಲ್ಲೇ ಮೆಸೇಜ್ ಕಳಿಸಿಕೊಂಡು, ಇಂಟರ್ ನೆಟ್ ನಲ್ಲಿ ಚಾಟ್ ಮಾಡುತ್ತಾ ಸಮಯ ಹಾಳು ಮಾಡುತ್ತಾರೆ ಎಂಬುದು ಹಲವರ ಗೊಣಗಾಟ. ಇದು ಸತ್ಯವೂ ಹೌದು. ಆದರೆ ಇದಕ್ಕೇನು ಕಾರಣ? ಮೊಬೈಲ್ ಓಪರೇಟರ್ ಗಳು ಉಚಿತ ಮೆಸೇಜುಗಳನ್ನು ಕೊಟ್ಟಿರುವುದೇ? ಅಥವಾ ಇಂಟರ್ ನೆಟ್ ಅಗ್ಗವಾಗಿರುವುದೇ? ನನ್ನ ಪ್ರಕಾರ ಎರಡೂ ಅಲ್ಲ. ತನ್ನ ಅಗತ್ಯ, ಅವಶ್ಯಕ್ತೆಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಬಳಸುವ ವಿವೇಚನೆಯನ್ನು ಕಳೆದುಕೊಂಡಿರುವುದು. ದಿನಕ್ಕೆ ನೂರೋ ನೂರೈವತ್ತೋ ಫ್ರೀ ಮೆಸೇಜ್ ಕೊಟ್ಟಿದ್ದಾರೆಂದ ಮಾತ್ರಕ್ಕೆ ನಾವು ಅಷ್ಟನ್ನೂ ಮುಗಿಸಬೇಕೆಂದು ಯಾರೂ ಹೇಳಿಲ್ಲವಲ್ಲ. ಆದರೂ ಇಂದು ಅನೇಕರು ಫ್ರೀಯಾಗಿ ಸಿಗುವ ಅಷ್ಟೂ ಮೆಸೇಜುಗಳನ್ನು ಕಳಿಸಿ, ತಮ್ಮ ಬೆರಳುಗಳನ್ನು ನೋಯಿಸಿಕೊಂಡೂ ಮುದಗೊಳ್ಳುತ್ತಾರೆ. ಇದು ಒಂಥರಾ ಫ್ರೀ ಸಿಕ್ಕುತ್ತದೆಂದಾದರೆ ತಮಗೆಲ್ಲವೂ ಬೇಕು ಎಂಬ ಲೋಭ. ಈ ಲೋಭವನ್ನು ತೀರಿಸಿಕೊಳ್ಳುವಾಗಲೇ ತಮ್ಮ ಆರೋಗ್ಯವನ್ನೂ ಕೆಡಿಸಿಕೊಳ್ಳುತ್ತೇವೆ ಎಂಬ ಅರಿವಿಲ್ಲದೇ ಹೋಗಿರುವುದು ಖೇದಕರ. ಅಮೆರಿಕಾದಲ್ಲಿ ಯುವ ಜನತೆ ಇದೇ ರೀತಿಯ ಲೋಭಕ್ಕೊಳಗಾಗಿ ಅನೇಕ ವರ್ಷಗಳಿಗೆ ಹಿಂದೆಯೇ ಬೆರಳುಗಳಿಗೆ ಸಂಬಂಧಿಸಿದ ಹಲವಾರು ತೊಂದರೆಗಳನ್ನು ಅನುಭವಿಸಿದ್ದಾರೆ. ಈಗ ಭಾರತದಲ್ಲೂ ಅದೇ ಪರಿಸ್ಥಿತಿ ವ್ಯಾಪಕವಾಗಿ ಹರಡಿದೆ.
ಇಂಟರ್ ನೆಟ್ ಬಳಸುವಾಗಲೂ ಅಷ್ಟೇ. ಅಗ್ಗ ಎಂದು ದಿನವಿಡೀ ಚಾಟ್ ಮಾಡುತ್ತಾ ಕುಳಿತರೆ, ಅದು ಆತನ (ಆಕೆಯ) ಮೂರ್ಖತನವೇ ಹೊರತು ತಂತ್ರಜ್ಞಾನದ್ದಲ್ಲ. ನನಗೆಷ್ಟು ಬೇಕು ಎಂದು ನಿರ್ಧರಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ಅದನ್ನು ಮೊದಲು ಬೆಳೆಸಿಕೊಳ್ಳೋಣ. ಆಗ ಈ ಮೇಲಿನ ಗೊಣಗಾಟಗಳಿಗೆ ಆಸ್ಪದವೇ ಇರುವುದಿಲ್ಲ.