ರಾಜ ನೈತಿಕತೆ ಇಲ್ಲದವರು ರಾಜ್ಯವನ್ನಾಳುವುದೇಕೆ?
ಇಷ್ಟು ದಿನವೂ ಕುರ್ಚಿಯ ಆಸೆ ತನಗಿಲ್ಲ. ತನಗೆ ರಾಜ್ಯದ ಹಿತವೇ ಮುಖ್ಯ ಎಂದೆಲ್ಲಾ ಬಡಾಯಿ ಕೊಚ್ಚುತ್ತಿದ್ದ ಯಡ್ಯೂರಪ್ಪ ಅವರು ನಿನ್ನೆ ಸಾರ್ವಜನಿಕವಾಗಿ “ಕುರ್ಚಿಯ ಆಸೆಯಿಂದ ಕೆಲವು ತಪ್ಪುಗಳನ್ನು ಮಾಡಬೇಕಾಯಿತು” ಎಂದು ಕ್ಷಮೆ ಕೇಳಿದ್ದನ್ನು ನೋಡಿ ಇಂತಹವರಿಗೆ ರಾಜ್ಯವನ್ನಾಳುವುದಕ್ಕೆ ಅವಕಾಶ ಸಿಕ್ಕಿದ್ದು ದೊಡ್ಡ ಪ್ರಮಾದವಾಯಿತು ಅಂತ ಅನ್ನಿಸುತ್ತದೆ. ಪ್ರಮಾಣ ವಚನ ಸ್ವೀಕರಿಸಿದಾಗಿನಿಂದಲೂ ತಪ್ಪುಗಳ ಸರಮಾಲೆಯನ್ನೇ ಮಾಡಿಕೊಂಡು, ಮತ್ತು ಅದಕ್ಕೆ ಆಗಾಗ ಕ್ಷಮೆಯನ್ನು ಕೇಳಿ ಇನ್ನು ತಪ್ಪುಮಾಡುವುದಿಲ್ಲವೆಂದು ಹೇಳಿಕೊಂಡು, ಇನ್ನೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಂಡಿರಲು ನಾಚಿಕೆಯಾಗುವುದಿಲ್ಲವೇ? ರೈತರಿಗೆ ಗುಂಡು ಹಾರಿಸಿದರು, ಕ್ಷಮೆ ಕೇಳಿದರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು, ಕ್ಷಮೆ ಕೇಳಿದರು, ಬಿ.ಜೆ.ಪಿ.ಯಲ್ಲಿ ಭಿನ್ನಮತ ಮುಗಿಲು ಮುಟ್ಟಿದಾಗ ನಾಯಿಗಳಂತೆ ಕಚ್ಚಾಡಿಕೊಂಡರು, ನಂತರ ಕ್ಷಮೆ ಕೇಳಿದರು, ಕಾಮುಕನೆಂದು ಪ್ರಸಿದ್ಧಿ ಪಡೆದ ರೇಣುಕಾಚಾರ್ಯನನ್ನು ಸಚಿವರನ್ನಾಗಿ ಮಾಡಿದರು, ಕ್ಷಮೆ ಕೇಳಿದರು. ಹೀಗೆ ಸಣ್ಣ ಮಕ್ಕಳಾಟದಂತೆ ಒಂದು ರಾಜ್ಯದ ಮುಖ್ಯಮಂತ್ರಿ ನಡೆದುಕೊಳ್ಳುವುದೆಂದರೇನು? ಕರ್ನಾಟಕ ರಾಜ್ಯದ ಆಡಳಿತದ ಹೊಣೆ ಹೊತ್ತ ಮೇಲೆ, ಯಾವುದೇ ಒಂದು ನಿರ್ಧಾರಗಳನ್ನು ಕೈಗೊಳ್ಳುವಾಗಲೂ ಅದರ ಪೂರ್ವಾಪರಗಳನ್ನು ಯೋಚಿಸದೇ, ನಂತರ ಕೆಲಸ ಕೆಟ್ಟ ಮೇಲೆ ಕ್ಷಮೆ ಕೇಳುವುದು ನಮ್ಮ ಮುಖ್ಯಮಂತ್ರಿಗಳಿಗೆ ರೂಢಿಯಾಗಿ ಬಿಟ್ಟಿದೆ. ಹೌದು, ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವುದು ಒಳ್ಳೆಯ ಗುಣವೇ. ಹಾಗಂತ ಎಷ್ಟು ಬಾರಿ ತಪ್ಪು ಮಾಡುವುದು? ಆಡಳಿತ ಚುಕ್ಕಾಣಿ ಹಿಡಿಯುವ ಮೊದಲೇ ತನ್ನಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವೇ ಎಂಬ ವಿಮರ್ಶೆಯನ್ನೂ ಮಾಡದ್ದಕ್ಕೆ ಶ್ರೀ ಯಡ್ಯೂರಪ್ಪನವರು ಈಗ ದಂಡ ತೆರುತ್ತಿದ್ದಾರೆ. ಅಲ್ಲಲ್ಲ, ಅಂತಹವರಿಗೆ ಅಧಿಕಾರವನ್ನು ಕೊಟ್ಟು ನಾವೆಲ್ಲರೂ ದಂಡ ತೆರುತ್ತಿದ್ದೇವೆ ಅನ್ನುವುದೇ ಸೂಕ್ತ. ಪ್ರತಿಪಕ್ಷಗಳು ಮಾಡಿದ ಆಕ್ಷೇಪಗಳಿಗೆ ಸದನದಲ್ಲಿ ಚಾಲೆಂಜ್ ಮಾಡುವ ಮಾತಾಡುತ್ತಾರೆ, ಆದರೆ ಈ ಕಡೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಾರೆ. ಈ ಡಬಲ್ ಗೇಮ್ ಆಡುವ ಯಡ್ಯೂರಪ್ಪ ಮಾಡಿದ ತಪ್ಪುಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ. ಜನತೆಯ ಬೊಕ್ಕಸದ ವೆಚ್ಚದಲ್ಲಿ ದೇವಸ್ಥಾನಗಳಿಗೆ ಹೋಗುವುದು, ಕಾಣಿಕೆ ಹಾಕುವುದು, ಪೂಜೆ ಮಾಡಿಸುವುದು ಹೀಗೆ ಮಾಡಿಕೊಂಡಿದ್ದರೇ ರಾಜ್ಯ ಸುಭಿಕ್ಷವಾಗುತ್ತದೆ ಅನ್ನುವಂತಿದ್ದರೆ, ಇಷ್ಟೆಲ್ಲಾ ಕಷ್ಟ ಇತ್ತೆ! ರಾಜ್ಯದ ಸರ್ವರೂ ಬೇರಾವ ಕೆಲಸವನ್ನೂ ಮಾಡದೇ, ನಿತ್ಯವೂ ದೇವಸ್ಥಾನಗಳಲ್ಲಿ ಕುಳಿತುಕೊಂಡು ಭಜನೆ ಮಾಡಿಕೊಂಡಿರ ಬಹುದಿತ್ತಲ್ಲವೇ? ಆಗ ಯಡ್ಯೂರಪ್ಪ ಮಾಡಿದ ಪೂಜೆಯಿಂದ ಆಗುವ ರಾಜ್ಯದ ಅಭಿವೃದ್ಧಿಗಿಂತ ಸಾವಿರ ಪಾಲು ಅಭಿವೃದ್ಧಿಯಾಗಬಹುದು. ಮೋದಿ ಸರ್ಕಾರದ ಮಾದರಿ ಅಂತ ಮೊದಲಿನಿಂದಲೂ ಬಾಯಿ ಬಡಕೊಂಡ ಯಡ್ಯೂರಪ್ಪ ಮತ್ತು ಅವರ ಸಂಗಡಿಗರು ಕಾರ್ಯದಲ್ಲಿ ಮೋದಿಯವರ ಕೆಲಸದ ಅಳತೆಗೋಲಿನ ಒಂದಿಂಚೂ ಮುಂದೆ ತಲುಪಿಲ್ಲ. ಬಿ.ಜೆ.ಪಿ.ಯಲ್ಲಿ ಜನಸೇವೆಯಿಂದ ಮತ್ತು ಜನಪರ ಕಾರ್ಯಗಳಿಂದಲೇ ಶಾಸಕರಾಗಿ ಚುನಾಯಿತರಾದವರನ್ನು ಮೂಲೆಗುಂಪು ಮಾಡಿ, ಸಮಾಜ ಘಾತುಕರನ್ನು ಮಂತ್ರಿಗಳನ್ನಾಗಿ ಮಾಡಿದ ಯಡ್ಯೂರಪ್ಪರಿಗೆ ಸೇವೆಗಿಂತ ಅಧಿಕಾರ ಮುಖ್ಯ ಮತ್ತು ಅದಕ್ಕಾಗಿ ಹಣವೇ ಮುಖ್ಯ ಎಂಬುದನ್ನು ಎತ್ತಿ ತೋರಿಸುತ್ತದೆ. ಅಜಾತಶತ್ರು ಶ್ರೀ ವಾಜಪೇಯಿಯವರ ಆಡಳಿತವು ಭಾರತವನ್ನು ಹೇಗೆ ಉನ್ನತವಾದ ಸ್ಥಾನಕ್ಕೇರಿಸಿತೋ, ಹಾಗೆಯೇ ಯಡ್ಯೂರಪ್ಪನವರ ಸರ್ಕಾರ ಕರ್ನಾಟಕವನ್ನು ಅಧಪತನಕ್ಕಿಳಿಸುತ್ತಿದೆ. ಖಂಡಿತವಾಗಿಯೂ ಇಂತಹವರಿಗೆ ರಾಜ್ಯವನ್ನಾಳಲು ಕನ್ನಡದ ಜನತೆ ಅವಕಾಶ ಕೊಡಬಾರದು.